

ವಿಜಯಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ನಡೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಶನಿವಾರ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ ಕಾರ್ಯಕರ್ತರು ರಾಜ್ಯಪಾಲರ ನಡೆಗೆ ಖಂಡನೆ ವ್ಯಕ್ತಪಡಿಸಿದರು. ಪ್ರಕರಣದಲ್ಲಿ ಸಿದ್ದರಾಮಯ್ಯ ಅವರಿಗೆ ಗೆಲುವಾಗಲಿದ್ದು, ರಾಜ್ಯಪಾಲರಿಗೆ ಮುಖಭಂಗ ನಿಶ್ಚಿತ ಎಂದು ಘೋಷಣೆ ಮೊಳಗಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೇಜೋವಧೆಗಾಗಿ ಮೊದಲಿನಿಂದಲೂ ಹುನ್ನಾರ ನಡೆದಿತ್ತು. ಅವರ ವ್ಯಕ್ತಿತ್ವಕ್ಕೆ ಕಪ್ಪು ಮಸಿ ಬಳಿಯುವ ಕುತಂತ್ರ ನಡೆದಿತ್ತು. ಅದರ ಫಲವೆಂಬಂತೆ ಇದೀಗ ರಾಜ್ಯಪಾಲರು ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿದ್ದಾರೆ. ರಾಜ್ಯಪಾಲರ ಈ ನಡೆ ಖಂಡನೀಯ ಎಂದು ಮುಖಂಡರು ಹೇಳಿದರು.
ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಗೆ ಕೊಡುತ್ತಿರುವ ಗ್ಯಾರಂಟಿಗಳ ವಿರುದ್ಧ ಬಿಜೆಪಿ ಪಿತೂರಿ ಮಾಡಿ ಕರ್ನಾಟಕ ಸರ್ಕಾರ ಬುಡಮೇಲು ಮಾಡಲು ಯತ್ನಿಸುತ್ತಿದೆ. ಇದು ಸಂವಿಧಾನ ವಿರೋಧಿ ನಡೆ. ರಾಜ್ಯಪಾಲರಿಗೆ ಕಾನೂನಿನ ಹೋರಾಟದಲ್ಲಿ ಸೋಲಾಗಲಿದೆ. ಜನ ಬಿಜೆಪಿ ವಿರುದ್ಧ ದಂಗೆ ಏಳುವುದು ನಿಶ್ಚಿತ ಎಂದರು.
ಮುಖ್ಯಮಂತ್ರಿಗಳು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬಾರದು. ಮುಖ್ಯಮಂತ್ರಿಗಳೊಂದಿಗೆ ಅಸಂಖ್ಯಾತ ಕಾರ್ಯಕರ್ತರಿದ್ದೇವೆ. ಅಹಿಂದ ನಾಯಕರಿದ್ದೇವೆ. ಶೋಷಿತ ಸಮುದಾಯಗಳ ಜನರಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರು ಧೈರ್ಯವಾಗಿ ಮುನ್ನುಗ್ಗಲಿ. ಅವರೊಂದಿಗೆ ನಾವಿದ್ದೇವೆ ಎಂಬ ಸಂದೇಶ ರವಾನಿಸಿದರು.
ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಗುರನಗೌಡ ಪಾಟೀಲ, ಅಬ್ದುಲ್‌ರಜಾಕ ಹೊರ್ತಿ, ಸಂಜೀವ ಕೊಂಬೋಗಿ, ಆರತಿ ಶಹಪೂರ, ಡಾ. ರವಿ ಬಿರಾದಾರ, ಎಸ್.ಎಂ. ಪಾಟೀಲ ಗಣಿಹಾರ, ಮಹಮ್ದ ರಫೀಕ ಟಪಾಲ, ಚಾಂದಸಾಬ ಗಡಗಲಾವ, ಗಂಗಾಧರ ಸಂಬಣ್ಣಿ, ಡಿ.ಎಲ್. ಚವಾಣ್, ಸಂಗನಗೌಡ ಹರನಾಳ, ಜಮೀರಅಹ್ಮದ ಬಕ್ಷಿ, ಸುರೇಶ ಗೊಣಸಗಿ, ಬೀರಪ್ಪ ಸಾಸನೂರ, ಮಲ್ಲು ಬಿದರಿ, ಸಾಹೇಬಗೌಡ ಬಿರಾದಾರ, ವಸಂತ ಹೊನಮೋಡೆ, ಜಾಕೀರ ಮುಲ್ಲಾ, ಎಂ. ಎಂ. ಮುಲ್ಲಾ ದ್ಯಾಬೇರಿ, ಫಯಾಜ ಕಲಾದಗಿ, ದೇಸು ಚವಾಣ್, ಬಿ.ಎಸ್. ಗಸ್ತಿ, ಸತೀಶ ಅಡವಿ, ಐಜಾಜ್ ಮಕ್ಬಿಲ್ ಸಾದತ್, ಗಂಗೂಬಾಯಿ ಧುಮಾಳೆ, ಜಯಶ್ರೀ ಭಾರತೆ, ಸರಿತಾ ಚವಾಣ್, ಆಸ್ಮಾ ಕಾಲೇಬಾಗ, ಕಾಶಿಬಾಯಿ ಹಡಪದ, ರಮೇಶ ಭಂಟನೂರ, ಲಾಲಸಾಬ ಕೋರಬು, ಆಶೀಫ ಶಾನವಾಲೆ, ಅಪ್ಪು ಪೂಜಾರಿ, ಪರಶುರಾಮ ಹೊಸಮನಿ, ಮಾದೇವ ರಾಠೋಡ ಮತ್ತಿತರರಿದ್ದರು.