

ವಿಜಯಪುರ: ಹಾಲು ಹಾಗೂ ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್ ದರ ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳು ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಮಹಾತ್ಮ ಗಾಂಧಿ ವೃತ್ತ, ಬಸವೇಶ್ವರ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜಿಲ್ಲಾಡಳಿತ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಬಳಿಕ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ದುಂಡಪ್ಪ ಅಂಗಡಿ ಮಾತನಾಡಿ, ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಹಾಲಿನ ದರ ಹೆಚ್ಚಿಸಿದೆ. ಅಲ್ಲದೇ, ಎಂಟು ತಿಂಗಳಿನಿಂದ ಪ್ರೋತ್ಸಾಹ ಧನ ಬಿಡುಗಡೆಗೊಳಿಸಿಲ್ಲ. ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್ ದರವೂ ಹೆಚ್ಚಿಸಲಾಗಿದೆ. ಇದೊಂದು ರೈತ ವಿರೋಧಿ ಸರ್ಕಾರ ಎಂದು ಟೀಕಿಸಿದರು.
ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಧಿಕ ಪ್ರಮಾಣದ ಹಣವನ್ನು ಸ್ವೀಕರಿಸಲಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಕೃಷಿ, ತೋಟಗಾರಿಕೆ ಹಾಗೂ ಕೃಷಿ ಉತ್ಪನ್ನ ಕುಂಠಿತವಾಗುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಯಂತ್ರೋಪಕರಣಗಳ ಮೂಲಕ ನಡೆಸುವ ಕೃಷಿ ಕೆಲಸಗಳಿಗೆ ರೈತರು ದುಬಾರಿ ಬಾಡಿಗೆ ಹಣ ನೀಡುತ್ತಿದ್ದಾರೆ. ಇದರಿಂದಾಗಿ ಅವರ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗುತ್ತಿದೆ ಎಂದರು.
ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ ಮಾತನಾಡಿ, ರೈತ ಮಕ್ಕಳ ವಿದ್ಯಾನಿಧಿ ಯೋಜನೆ ಸ್ಥಗಿತಗೊಳಿಸಿರುವುದರಿಂದ ಮಕ್ಕಳ ಕಲಿಕೆಗೂ ತೊಂದರೆಯಾಗುತ್ತಿದೆ. ಬಿತ್ತನೆ ಬೀಜ ಮತ್ತು ರಸ ಗೊಬ್ಬರ ದರ ಏರಿಸುವ ಮೂಲಕ ರೈತರಿಗೆ ಇನ್ನಷ್ಟು ಸಂಕಷ್ಟಕ್ಕೆ ತಳ್ಳಿದೆ. ಕಳೆದ ಒಂದು ದಶಕದಿಂದ ಕನಿಷ್ಟ 200ರೂ.ಗಳಿಗೆ 1 ಕೆಜಿ ಬಿತ್ತನೆ ಬೀಜ ಲಭ್ಯವಾಗುತ್ತಿತ್ತು. ಸರ್ಕಾರ ಇದಕ್ಕೆ 25ರೂ. ಮಾತ್ರ ಸಹಾಯಧನ ನೀಡುತ್ತಿತ್ತು. ಇಂದು ಅದೇ ಬಿತ್ತನೆ ಬೀಜ 800 ರೂ.ಗಳಿಗೂ ಅಧಿಕ ದರದಲ್ಲಿ ಸಿಗುತ್ತಿದೆ. ಆದರೆ ಸರ್ಕಾರದ ಸಹಾಯ ಧನ ಮಾತ್ರ ಹೆಚ್ಚಳವಾಗಿಲ್ಲ ಎಂದರು.
ಮುಖಂಡರಾದ ಚಂದ್ರಶೇಖರ ಕವಟಗಿ, ಈರಣ್ಣ ರಾವೂರ, ಮಳುಗೌಡ ಪಾಟೀಲ, ಬಾಲರಾಜ ರೆಡ್ಡಿ, ರಾಜಶೇಖರ ಡೊಳ್ಳಿ, ಸುರೇಶ ಬಿರಾದಾರ, ರೇಣುಕಾ ಪರಸಪ್ಪಗೌಳ, ರಾಚಪ್ಪಾ ಬಿರಾದಾರ, ಡಿ.ಜಿ. ಬಿರಾದಾರ, ಅಶ್ವಿನಿ ಪಟ್ಟಣಶೆಟ್ಟಿ, ಕುಮಾರ ನಿಡೋನಿ, ಸ್ವಪ್ನಾ ಕಣಮುಚನಾಳ, ಪಾಂಡುಸಾಹುಕಾರ ದೊಡಮನಿ ಮತ್ತಿತರರಿದ್ದರು.