

ತರೀಕೆರೆ: ಭಾಷೆ ಜತೆ ರಾಷ್ಟ್ರಾಭಿಮಾನವಿದ್ದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಪಿ.ಕೃಷ್ಣೇಗೌಡ ಹೇಳಿದರು.
ಅಜ್ಜಂಪುರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಏರ್ಪಡಿಸಿದ್ದ ಕನ್ನಡರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸದುದ್ದೇಶದಿಂದ ಸ್ಥಾಪಿಸಿರುವ ಸಂಘಟನೆ ಕೇವಲ ರಾಜ್ಯೋತ್ಸವಕ್ಕೆ ಸೀಮಿತವಾಗದೆ ರಾಜ್ಯದ ಕಾರ್ಮಿಕರು, ರೈತರು, ಶೋಷಿತ ವರ್ಗದವರ ಧ್ವನಿಯಾಗಿ ಕೆಲಸ ಮಾಡುತ್ತಿದೆ. 25 ವರ್ಷಗಳಿಂದ ಸಂಘಟನೆ ರೈತರು, ಕಾರ್ಮಿಕರು ಹಾಗೂ ಕನ್ನಡಿಗರ ಪರ ಹೋರಾಟ ಮಾಡುತ್ತಿದೆ. ರಾಜ್ಯದಲ್ಲಿ ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ ಸೂತಕದ ಮನೆಯಂತಾಗಿದ್ದು, ರಾಜಕೀಯ ಪಕ್ಷದವರಂತೆ ನಡೆದುಕೊಳ್ಳುವ ಕಸಾಪ ಅಧ್ಯಕ್ಷರ ವರ್ತನೆ ಖಂಡನಾರ್ಹ. ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಸಾಪ ರಾಜ್ಯಾಧ್ಯಕ್ಷ ವಿರುದ್ಧ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಪಂ ಮಾಜಿ ಸದಸ್ಯ ಎ.ಸಿ.ಚಂದ್ರಪ್ಪ ಮಾತನಾಡಿ, ರಾಜ್ಯೋತ್ಸವ ನಿತ್ಯೋತ್ಸವವಾದರೆ ಮಾತ್ರ ಭಾಷೆ ಬೆಳವಣಿಗೆ ಸಾಧ್ಯ. ಉನ್ನತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ಪ್ರಶ್ನೆ ಪತ್ರಿಕೆ ಕನ್ನಡ ಭಾಷೆಯಲ್ಲಿ ಬದಲಾಯಿಸಬೇಕು ಎಂದು ಒತ್ತಾಯಿಸಿದರು.
ಅಜ್ಜಂಪುರ ತಾಲೂಕು ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಎಚ್.ಗುರುಮೂರ್ತಿ, ತಾಲೂಕು ಅಧ್ಯಕ್ಷ ದೇವರಾಜು ಜಿಲ್ಲಾ ಗೌರವ ಅಧ್ಯಕ್ಷರ ತೆರೆದಾಳ ಮಂಜುನಾಥ್, ಪದಾಧಿಕಾರಿಗಳಾದ ತಿಪ್ಪೇಶ್ ಮಡಿವಾಳ್, ನೀಲಾಂಬಿಕೆ, ವಿಜಯಕುಮಾರಿ, ಮಧುಮಾಲ, ಎಚ್.ಶಿವಣ್ಣ, ಪಟ್ಟಣ ಪಂಚಾಯಿತಿ ಮುಖ್ಯಾಕಾರಿ ಟಿ.ಜಿ.ರಮೇಶ್ ಮತ್ತಿತರರಿದ್ದರು.