

ದೊಡ್ಡಬಳ್ಳಾಪುರ : ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ರಹಸ್ಯವಾಗಿ ಹೂತುಹಾಕಲಾಗಿದೆ ಎಂಬ ಪ್ರಕರಣದ ವರದಿ ಮಾಡಲು ಹೋಗಿದ್ದ ನಾಲ್ವರು ಯೂಟ್ಯೂಬರ್ಗಳ ಮೇಲೆ ಧರ್ಮಸ್ಥಳದ ಕೆಲ ಕಿಡಿಗೇಡಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಯೂಟ್ಯೂಬರ್ಗಳ ಮೇಲೆ ಹಲ್ಲೆ ಮಾಡಿದವರನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ ಗಡಿಪಾರು ಮಾಡಬೇಕು ಎಂದು ಕಾರ್ಮಿಕ ಮುಖಂಡ ಪಿ ಎ ವೆಂಕಟೇಶ್ ಆಗ್ರಹಿಸಿದರು.
ತಾಲೂಕು ಕಚೇರಿ ಮುಂಭಾಗ ಮಂಗಳವಾರ ತಾಲೂಕು ಕನ್ನಡ ಪಕ್ಷ, ಕೆ.ಆರ್.ಎಸ್ ಪಕ್ಷ, ಸಿಐಟಿಯು ಸಹಯೋಗದೊಂದಿಗೆ ತಾಲೂಕು ಸ್ವತಂತ್ರ ಬರಹಗಾರರು, ಹಾಗೂ ಪತ್ರಕರ್ತರು ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ನಡೆಸುತ್ತಿದೆ. ಧರ್ಮಸ್ಥಳದ ಹಲವು ಪ್ರದೇಶಗಳಲ್ಲಿ ದೂರುದಾರ ಗುರುತಿಸಿರುವ ಸ್ಥಳಗಳಲ್ಲಿ ಮೃತದೇಹಗಳ ಕಳೇಬರಗಳನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ. ಈವರೆಗೆ, ಹಲವು ಕಳೇಬರಗಳು ಎಸ್ಐಟಿ ಅಧಿಕಾರಿಗಳಿಗೆ ದೊರೆತಿವೆ. ಪ್ರಕರಣವು ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಹಲವರನ್ನು ಹತ್ಯೆ ಮಾಡಿ, ರಹಸ್ಯವಾಗಿ ಹೂತುಹಾಕಲಾಗಿದೆ ಎಂಬ ಆರೋಪಕ್ಕೆ ಪುಷ್ಠಿ ನೀಡುತ್ತಿವೆ ಎಂದರು.
ಇಂತಹ ಗಂಭೀರ ಪ್ರಕರಣದ ತನಿಖೆಯ ಕುರಿತು ವರದಿಗೆ ಹೋಗಿದ್ದ ನಾಲ್ವರು ಯೂಟ್ಯೂಬರ್ ಗಳ ಮೇಲೆ ಗೂಂಡಾಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಪ್ರಕರಣದ ವರದಿ ಮಾಡದಂತೆ ತಡೆಯಲು ದೌರ್ಜನ್ಯ ಎಸಗಿದ್ದಾರೆ. ಗೂಂಡಾಗಳು ಧರ್ಮಸ್ಥಳದ ಪ್ರತಿಷ್ಠಿತ ಕುಟುಂಬವೊಂದರ ಕುಮ್ಮಕ್ಕಿನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆ ದಾಂಧಲೆಕೋರರು ಪೊಲೀಸರ ಮೇಲೆಯೇ ಹಲ್ಲೆ ನಡೆಸಲು ಯತ್ನಿಸಿರುವುದು ಕಂಡುಬಂದಿದೆ ಎಂದರು. ಗೂಂಡಾಗಳನ್ನು ತಕ್ಷಣವೇ ಬಂಧಿಸಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ದಾಂಧಲೆ ಮತ್ತು ಹಲ್ಲೆಗೆ ಗೊಂದಲಗಳಿಗೆ ಕುಮ್ಮಕ್ಕು ನೀಡಿದವರು ಯಾರು ಎಂಬುದನ್ನು ತನಿಖೆ ಮಾಡಿ ಅವರನ್ನೂ ಬಂಧಿಸಬೇಕು ಎಂದರು.
ಪತ್ರಕರ್ತರಾದ ರಾಜುಸಣ್ಣಕ್ಕಿ, ಗುರುಪ್ರಸಾದ್, ದಾಳಿಗಪ್ಪ, ದಲಿತ ಮುಖಂಡ ಮಂಜುನಾಥ್ ಕನ್ನಡಪರ ಹೋರಾಟಗಾರ ತೂಬಗೆರೆ ಷರೀಫ್, ಎಸ್ಡಿಯುಆರ್ ಸಂಟನೆಯ ಸಾಧಿಕ್ ಇದ್ದರು.