

ಬೆಳಗಾವಿ: ನೆರೆ ಬಾಂಗ್ಲಾದೇಶದಲ್ಲಿ ನೆಲೆಸಿರುವ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ನಗರದಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿ, ದೌರ್ಜನ್ಯ ತಡೆಯುವಂತೆ ಜಿಲ್ಲಾಧಿಕಾರಿ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿದರು.
ಕಳೆದ ನಾಲ್ಕು ತಿಂಗಳಿನಿಂದ ಬಾಂಗ್ಲಾ ದೇಶದಲ್ಲಿನ ಹಿಂದುಗಳ ಮನೆಗಳ ಮೇಲೆ ದಾಳಿ, ಮಹಿಳೆಯರ ಮೇಲೆ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದೆ. ಸಾಮಾಜಿಕ ಸೇವೆಯಲ್ಲಿ ನಿರತವಾಗಿರುವ ಇಸ್ಕಾನ್ ಸಂಘಟನೆಯ ಚಟುವಟಿಕೆಗಳ ಮೇಲೆ ವಿನಾಕಾರಣ ಮಹ್ಮಮದ್ ಯುನಿಸ್ ನೇತೃತ್ವದ ಸರ್ಕಾರ ಪ್ರತಿಬಂಧಕ ಹೇರಲು ಮುಂದಾಗಿರುವುದು ಖಂಡನೀಯ. ಅಲ್ಲಿನ ಹಿಂದು ದೇವಾಲಯ ಮತ್ತು ಆಶ್ರಮದ ಮೇಲೆ ದಾಳಿ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರ ಕೂಡಲೇ ಬಾಂಗ್ಲಾದೇಶದಲ್ಲಿ ನೆಲೆಸಿರುವ ಹಿಂದುಗಳ ಪ್ರಾಣ, ಮಾನ, ಆಸ್ತಿ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಕೃಷ್ಣ ಭಟ್, ಪ್ರಮೋದಕುಮಾರ ವಕ್ಕುಂದಮಠ, ಆನಂದ ಕರಲಿಂಗಣ್ಣವರ, ಮುಪ್ಪಿನ ಕಾಡಸಿದ್ದೇಶ್ವರ ಸ್ವಾಮೀಜಿ, ಅಮಿತ ಸುತಾರ, ಎಂ.ಕೆ.ಏಣಗಿಮಠ, ನಾಗೇಶ ಕಾಂಬಳೆ ಇತರರಿದ್ದರು.