ಹಿಂದುಗಳ ಮೇಲಿನ ದೌರ್ಜನ್ಯಕ್ಕೆ ಖಂಡನೆ

h4-Sadbhav 1
Published on

ಹುಬ್ಬಳ್ಳಿ: ಬಾಂಗ್ಲಾ ದೇಶದ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಸದ್ಭಾವ ವೇದಿಕೆ ವತಿಯಿಂದ ನಗರದಲ್ಲಿ ಬುಧವಾರ ಪಂಜಿನ ಮೆರವಣಿಗೆ ನಡೆಯಿತು.

ನಗರದ ಮೂರುಸಾವಿರ ಮಠದ ಆವರಣದಿಂದ ಹೊರಟ ಮೆರವಣಿಗೆಯು ದಾಜಿಬಾನಪೇಟೆಯಿಂದ ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿ ತಲುಪಿತು. ನಂತರ ಹಿಂದುಗಳಿಗೆ ಭಾರತದಿಂದ ಮಾನಸಿಕ ಸ್ಥೈರ್ಯ ತುಂಬುವುದು ಹಾಗೂ ಅಲ್ಲಿನ ಹಿಂದುಗಳ ರಕ್ಷಣೆ ಅಗತ್ಯ ಕ್ರಮ ಜರುಗಿಸುವಂತೆ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ರವಾನಿಸಲಾಯಿತು.

ಇದಕ್ಕೂ ಮೊದಲು ಮೂರುಸಾವಿರ ಮಠದ ಆವರಣದಲ್ಲಿ ಜರುಗಿದ ಪ್ರತಿಭಟನಾ ಸಭೆಯಲ್ಲಿ ಮತನಾಡಿದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಧರ್ಮದ ಮೇಲೆ ಸವಾರಿ ಮಾಡುವುದು, ಹಿಂಸಿಸುವುದು ಸರಿಯಲ್ಲ. ಭಾರತದಿಂದಲೇ ಬಾಂಗ್ಲಾದೇಶ ನಿರ್ಮಾಣವಾಗಿದೆ ಎಂಬ ಕೃತಜ್ಞತಾ ಭಾವ ಬಾಂಗ್ಲಾ ವಾಸಿಗಳಿಗೆ ಇಲ್ಲವಾಗಿದೆ. ಭಾರತೀಯರನ್ನು ಅವರು ಗೌರವದಿಂದ ನಡೆಸಿಕೊಳ್ಳಬೇಕು. ದಯೆ ಇಲ್ಲದ ಧರ್ಮ, ಧರ್ಮವೇ ಅಲ್ಲ. ಕೂಡಲೇ ಬಾಂಗ್ಲಾ ಸರ್ಕಾರ ಹಿಂಸಾ ಪ್ರವೃತ್ತಿ ತಡೆದು ಗೌರವ ಪೂರ್ವಕ ಅಲ್ಲಿನ ಹಿಂದುಗಳಿಗೆ ಗೌರವ ಕೊಡಬೇಕು ಎಂದು ಆಗ್ರಹಿಸಿದರು.

ಸದ್ಭಾವ ವೇದಿಕೆ ಸಂಯೋಜಕ ಶಂಕರಣ್ಣ ಮುನವಳ್ಳಿ ಮಾತನಾಡಿ, ಧರ್ಮ ಗೆದ್ದೇ ಗೆಲ್ಲುತ್ತದೆ. ಸ್ವಲ್ಪ ಅಡೆತಡೆ ಆಗಬಹುದು. ಬಾಂಗ್ಲಾದವರಿಗೆ ಹಿಂದುಗಳ ಸಹಕಾರ ಇದೆ. ಆದರೆ, ಬಾಂಗ್ಲಾ ದೇಶವಾಸಿಗಳು ಇದನ್ನು ಮರೆತ್ತಿದ್ದಾರೆ. ಇದರ ಅರಿವು ಮೂಡಿಸಬೇಕಿದೆ ಎಂದರು.

ಹುಬ್ಬಳ್ಳಿ-ಧಾರವಾಡ ಇಸ್ಕಾನ್ ಅಧ್ಯಕ್ಷ ರಾಜೀವ ಲೋಚನದಾಸ ಮಾತನಾಡಿ, ಜ್ಞಾನದ ತಲಾವರದಿಂದ ಅಜ್ಞಾನ ಕಳೆಯಬಹುದು. ಎಲ್ಲದಕ್ಕೂ ಕತ್ತಿ ಮಾತಾಡಬಾರದು ಎಂಬ ಅಭಿಪ್ರಾಯ ನಮ್ಮ ಗುರುಗಳದು. ಅಸುರೀ ಪ್ರವೃತ್ತಿ ಬಿಟ್ಟು ಮಾನವೀಯ ನೆಲೆ ಕಂಡುಕೊಳ್ಳುವ ನಿಟ್ಟಿನಲ್ಲಿ ಬಾಂಗ್ಲಾದವರು ಮುಂದುವರಿಯಬೇಕು ಎಂದರು.

ಇಸ್ಕಾನ್‌ನ ರಘೋತ್ತಮ ದಾಸ ಅವರು ಮಾತನಾಡಿದರು.

ವಿನಾಯಕ ತಲಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಕುಂದಗೋಳದ ಶ್ರೀ ಬಸವಣ್ಣಜ್ಜನವರು, ಸಂಯೋಜಕ ಮಹಾದೇವ ಕರಮರಿ, ಶಾಸಕ ಮಹೇಶ ಟೆಂಗಿನಕಾಯಿ, ಪ್ರಮುಖರಾದ ಎಚ್.ಎನ್. ನಂದಕುಮಾರ, ಪ್ರೊ. ರಘು ಅಕಮಂಚಿ, ಜಿತೇಂದ್ರ ಮಜೇಥಿಯಾ, ಅನಿಲ ಕವಿಶೆಟ್ಟಿ, ಸುಭಾಷಸಿಂಗ್ ಜಮಾದಾರ, ಭಾಸ್ಕರ ಜಿತೂರಿ ಇತರರು ಇದ್ದರು. ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ವಿವಿಧೆಡೆಯಿಂದ ಯುವಕರು ಬೈಕ್ ರ‌್ಯಾಲಿ ನಡೆಸಿ ಮೂರುಸಾವಿರ ಮಠದ ಆವರಣಕ್ಕೆ ಆಗಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net