

ಹೊನ್ನಾವರ: ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ತಾಲೂಕು ಬಿಜೆಪಿ ರೈತ ಮೋರ್ಚಾ ಮತ್ತು ಹೊನ್ನಾವರ ಮಂಡಲದಿಂದ ತಹಸೀಲ್ದಾರ್ ರವಿರಾಜ್ ದೀಕ್ಷಿತ್ ಅವರ ಮೂಲಕ ರಾಜ್ಯಪಾಲರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಇತ್ತೀಚೆಗೆ ಗ್ಯಾರಂಟಿಗಳ ಮೂಲಕ ರಾಜ್ಯದಲ್ಲಿ ಆಡಳಿತಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವು ಹಿಂದಿನ ಬಿಜೆಪಿ ಸರ್ಕಾರದ ರೈತ ಪರ ಅನೇಕ ಯೋಜನೆಗಳನ್ನು ಸ್ಥಗಿತಗೊಳಿಸಿ ರೈತರಿಗೆ ಅನ್ಯಾಯ ಮಾಡಿದೆ. ರೈತ ವಿದ್ಯಾನಿಧಿ, ಭೂ ಸಿರಿ ಯೋಜನೆ, ಶ್ರಮಶಕ್ತಿ ಯೋಜನೆ ಮತ್ತು ರೈತ ಸಂಪದ ಯೋಜನೆಗಳನ್ನು ಕೈಬಿಟ್ಟಿದೆ. ಅಧಿಕಾರಕ್ಕೆ ಬರುವಾಗ ರೈತರ ಹೆಸರನ್ನು ಬಳಸಿ, ಅಧಿಕಾರ ಸಿಕ್ಕ ಮೇಲೆ ಅವರನ್ನು ತುಳಿಯುವಂತಹ ಕಾರ್ಯವನ್ನು ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ. ಈಗಾಗಲೇ ಹಲವು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.
ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎನ್.ಎಸ್. ಹೆಗಡೆ, ಶಿವರಾಜ ಮೇಸ್ತಾ, ಎಂ.ಎಸ್. ಹೆಗಡೆ ಕಣ್ಣಿಮನೆ, ವಿಜಯ ಕಾಮತ್, ಸುಭಾಷ ಹರಿಜನ್, ವಿನೋದ ಮೇಸ್ತಾ, ನಿಶಾ ಶೇಟ್, ಸುಜಾತಾ ಮೇಸ್ತಾ, ನಾಗರತ್ನ ಕೋನೇರಿ, ಭಾರತಿ ಭಂಡಾರಿ, ದತ್ತಾ ಅವಧಾನಿ, ಗಣೇಶ ಪೈ ಇತರರು ಇದ್ದರು.