

ಹನೂರು: ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನ ಇಂಡಿಗನತ್ತ ಅರಣ್ಯ ಪ್ರದೇಶದ ಬಳಿ ಮೇಯಲು ತೆರಳುವ ದನ-ಕರುಗಳಿಗೆ ಪಟಾಕಿ ಸಿಡಿಸಿ ಘಾಸಿಗೊಳಿಸುತ್ತಿರುವುದನ್ನು ಖಂಡಿಸಿ ಸೋಮವಾರ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಮ.ಬೆಟ್ಟದಲ್ಲಿ ಪ್ರತಿಭಟನೆ ನಡೆಯಿತು.
ಮ.ಬೆಟ್ಟದಲ್ಲಿ ಕೊಳ್ಳೇಗಾಲದ ಕಡೆಗೆ ತೆರಳುವ ಪ್ರವೇಶ ದ್ವಾರದ ಬಳಿ ಜಮಾಯಿಸಿದ್ದ ರೈತರು ಅರಣ್ಯ ಇಲಾಖೆ ಕಾರ್ಯವೈಖರಿಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಹೊನ್ನೂರು ಪ್ರಕಾಶ್ ಮಾತನಾಡಿ, ಇಂಡಿಗನತ್ತ ಗ್ರಾಮವು ಕಾವೇರಿ ವನ್ಯಜೀವಿ ಧಾಮದ ಅರಣ್ಯ ಪ್ರದೇಶದೊಳಗಿದ್ದು, ಇಲ್ಲಿನ ಜನರು ಜೀವನೋಪಾಯಕ್ಕಾಗಿ ದನ-ಕರುಗಳನ್ನು ಸಾಕಿಕೊಂಡಿದ್ದಾರೆ. ತಲತಲಾಂತರದಿಂದಲೂ ಅರಣ್ಯ ಪ್ರದೇಶದ ಆಸುಪಾಸಿನಲ್ಲಿ ಜಾನುವಾರುಗಳನ್ನು ಮೇಯಿಸುತ್ತಿದ್ದಾರೆ. ಪ್ರಸ್ತುತ ಮೇಯಲು ತೆರಳುತ್ತಿರುವ ಸುಮಾರು 300ರಿಂದ 400 ದನ-ಕರುಗಳನ್ನು ಕಳೆದ ಒಂದು ವಾರದಿಂದ ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಪಟಾಕಿ ಸಿಡಿಸಿ ಘಾಸಿಗೊಳಿಸುವುದರ ಮೂಲಕ ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಸುತ್ತಲು ಅರಣ್ಯದಿಂದ ಕೂಡಿರುವ ಈ ಪ್ರದೇಶದಲ್ಲಿ ದನಕರುಗಳನ್ನು ಮೇಯಲು ಎಲ್ಲಿಗೆ ಕರೆದೊಯ್ಯಲು ಸಾಧ್ಯ? ಆದರೆ ಅರಣ್ಯ ಸಿಬ್ಬಂದಿ ಮೇಯಲು ಬಿಡದೆ ತೊಂದರೆ ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಇದರಿಂದ ರೈತರು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಸಚಿವರು ರಾಜೀನಾಮೆ ನೀಡಬೇಕು: ಮಲೆ ಮಹದೇಶ್ವರ ವನ್ಯಜೀವಿ ಧಾಮದ ಪ್ರದೇಶದಲ್ಲಿ 6 ಹುಲಿಗಳು ಮೃತಪಟ್ಟಿವೆ. ಆದರೆ ಅರಣ್ಯ ಸಚಿವರು ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆಯೇ ಹೊರತು ಈವರೆಗೂ ರೈತರ ಸಭೆ ಕರೆದು ಚರ್ಚಿಸಿಲ್ಲ. ಹಾಗಾಗಿ ಹುಲಿಗಳ ಸಾವಿಗೆ ಸಚಿವರೇ ಹೊಣೆಯಾಗಿದ್ದು, ಅವರ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಎಸಿಎಫ್ ಮರಿಸ್ವಾಮಿ ಅವರನ್ನು ರೈತರು ತೀವ್ರ ತರಾಟೆಗೆ ತೆಗೆದುಕೊಂಡರು. ಬಳಿಕ ಇನ್ನು ಮುಂದೆ ದನಕರುಗಳನ್ನು ಮೇಯಲು ತೊಂದರೆ ನೀಡುವುದಿಲ್ಲ ಎಂದು ತಿಳಿಸಿದ ಬಳಿಕ ಪ್ರತಿಭಟನೆಯನ್ನು ಕೈ ಬಿಡಲಾಯಿತು.