ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಖಂಡನೆ

IMG-20240817-WA0109
Published on

ಹೊಳೆನರಸೀಪುರ: ಪಶ್ಚಿಮ ಬಂಗಾಳದ ಆಸ್ಪತ್ರೆಯೊಂದರಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿ, ಕೊಲೆಗೈದಿರುವ ಕೃತ್ಯವನ್ನು ಖಂಡಿಸಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಕಪ್ಪು ಪಟ್ಟಿ ಧರಿಸಿ, ಒಪಿಡಿ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.


ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಧನಶೇಖರ್ ಮಾತನಾಡಿ, ಹೆಣ್ಣು ಮಕ್ಕಳ ಮೇಲೆ ಇಂತಹ ನೀಚ ಕೃತ್ಯ ನಡೆಯುತ್ತಿರುವುದು ದುರದೃಷ್ಟಕರ. ಪಶ್ಚಿಮ ಬಂಗಾಳದ ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಿ ಕೊಲೆಗೈದಿರುವ ಕೊಲೆಪಾತಕರನ್ನು ಗಲ್ಲಿಗೇರಿಸಬೇಕು. ಈ ಕೃತ್ಯದಿಂದ ಭಾರತ ದೇಶವೇ ತಲೆತಗ್ಗಿಸುವಂತಾಗಿದೆ. ಹೆಣ್ಣು ಮಕ್ಕಳು ರಾತ್ರಿ ವೇಳೆ ಸರ್ಕಾರಿ ಇಲಾಖೆಗಳಲ್ಲಾಗಲಿ, ಆಸ್ಪತ್ರೆಗಳಲ್ಲಾಗಲಿ, ಸಂಘ ಸಂಸ್ಥೆ ಕಚೇರಿಗಳಲ್ಲಾಗಲಿ ಮುಕ್ತವಾಗಿ ಕೆಲಸ ಮಾಡದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ನೀಚ ಕೃತ್ಯವನ್ನು ಖಂಡಿಸಿ, ದೇಶಾದ್ಯಂತ 24 ಗಂಟೆ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದೇವೆ. ನಮ್ಮ ಹಾಸನ ಜಿಲ್ಲೆಯಲ್ಲಿಯೂ ಎಲ್ಲ ತಾಲೂಕುಗಳಲ್ಲಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಕಪ್ಪುಪಟ್ಟಿ ಧರಿಸಿ ಬಾಹ್ಯ ಬೆಂಬಲ ಸೂಚಿಸುತ್ತಿದ್ದೇವೆ ಎಂದು ಹೇಳಿದರು.


ಈಗಾಗಲೇ ಜನಪ್ರತಿನಿಧಿಗಳಿಗೂ ಆಸ್ಪತ್ರೆ ಒಳಗೆ ರಾತ್ರಿ ಪಾಳಯದಲ್ಲಿ ಮಹಿಳೆಯರ ಹಿತದೃಷ್ಟಿಯಿಂದ ಪೊಲೀಸ್ ಔಟ್‌ಪೋಸ್ಟ್ ಸ್ಥಾಪಿಸುವಂತೆ ತಿಳಿಸಿದ್ದೇವೆ. ಪೋಲಿಸ್ ಇಲಾಖೆ ಮತ್ತು ಜನಪ್ರತಿನಿಧಿಗಳು ಈಗಲಾದರೂ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.


ನಂತರ ತಾಲೂಕು ದಂಡಾಧಿಕಾರಿ ಕೆಕೆ ಕೃಷ್ಣಮೂರ್ತಿ, ಹಾಗೂ ಪೊಲೀಸ್ ವೃತ್ತ ನಿರೀಕ್ಷಕ ಪ್ರದೀಪ್ ಅವರಿಗೆ ಮನವಿ ಸಲ್ಲಿಸಲಾಯಿತು. ಸಾರ್ವಜನಿಕ ಆಸ್ಪತ್ರೆಯ ಒಪಿಡಿ ಹೊರತುಪಡಿಸಿ ತುರ್ತು ಪರಿಸ್ಥಿತಿಯಲ್ಲಿ ಬರುವ ರೋಗಿಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಪ್ರತಿದಿನ ಬಣಗುಡುತ್ತಿದ್ದ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ವಿರಳವಾಗಿತ್ತು. ಮಾನವೀಯತೆ ದೃಷ್ಟಿಯಿಂದ ಯಾವುದೇ ರೋಗಿಗಳು ಬಂದರೂ ಸಹ ತುರ್ತು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.


ಇದೇ ಸಂದರ್ಭದಲ್ಲಿ ವೈದ್ಯರುಗಳಾದ ರಮೇಶ್, ನಾಗೇಂದ್ರ, ಲೋಕೇಶ್, ಸತ್ಯ ಪ್ರಕಾಶ್, ರೇಖಾ, ಪ್ರತಿಭಾ, ಅಶ್ವತಿ, ಭವ್ಯಾ, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net