ಮರಗಳ ಅಕ್ರಮ ಮಾರಾಟಕ್ಕೆ ಖಂಡನೆ, ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ, ಪೌರಾಯುಕ್ತರ ಕಚೇರಿಗೆ ಮುತ್ತಿಗೆ

20 Nela ph 04 BJP Protest
Published on

ನೆಲಮಂಗಲ: ನಗರಸಭೆ ಪಂಪ್‌ಹೌಸ್‌ನಲ್ಲಿದ್ದ ಲಕ್ಷಾಂತರ ಮೌಲ್ಯದ ಮರಗಳನ್ನು ಅಕ್ರಮವಾಗಿ ಕಡಿದು ಮಾರಾಟ ಮಾಡಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರಸಭಾ ಕಚೇರಿ ಆವರಣದಲ್ಲಿ ಸಮಾವೇಶಗೊಂಡ ಬಿಜೆಪಿ ಕಾರ್ಯಕರ್ತರು ನಗರಸಭೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಬಳಿಕ ಪೌರಾಯುಕ್ತರ ಕಚೇರಿಗೆ ಮುತ್ತಿಗೆ ಹಾಕಿದರು.

ನಗರಸಭೆಗೆ ಸೇರಿದ ಪಂಪ್‌ಹೌಸ್‌ನಲ್ಲಿ ಮೂರ‌್ನಾಲ್ಕು ದಶಕಗಳಿಂದ ಬೆಳೆದಿದ್ದ ಬೃಹತ್ ಗಾತ್ರದ 13 ನೀಲಗಿರಿ ಮರಗಳಿದ್ದವು. ನಿಯಮಾನುಸಾರ ಟೆಂಡರ್ ಕರೆಯದೆ, ಅವನ್ನು ಕಡಿದು ಮಾರಾಟ ಮಾಡಲಾಗಿದೆ. ನಗರಸಭೆ ಪೌರಾಯುಕ್ತರು ಸೇರಿ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಯ ಗಮನಕ್ಕೆ ಈ ವಿಷಯವನ್ನು ತರದೆ ಗೌಪ್ಯವಾಗಿರಿಸಲಾಗಿದೆ. ಈ ವಹಿವಾಟಿನಲ್ಲಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೇ ಸಾಬೀತಾಗುವ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿರುವುದಾಗಿ ಬಿಜೆಪಿ ಕಾರ್ಯಕರ್ತರು ತಿಳಿಸಿದರು.

ಈ ಅಕ್ರಮದಲ್ಲಿ ನಗರಸಭೆಯ ಕೆಲ ಅಧಿಕಾರಿಗಳು ಶಾಮೀಲಾಗಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿ ಅವರು ಈ ಬಗ್ಗೆ ಗಮನ ಹರಿಸಿ ಸೂಕ್ತ ತನಿಖೆಗೆ ಮುಂದಾಗಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾದ್ಯಕ್ಷ ರಾಹುಲ್ ಗೌಡ, ನಗರ ಘಟಕ ಅಧ್ಯಕ್ಷ ರವಿ. ಪ್ರ. ಕಾರ್ಯದರ್ಶಿ ಸುಬ್ರಮಣಿ, ಮುಖಂಡರಾದ ರಾಜಮ್ಮಪ್ರಕಾಶ್, ಮಂಜಮ್ಮ, ಪ್ರಕಾಶ್, ಪುನೀತ್, ರುದ್ರೇಶ್ ಜಿ.ವಿ.ಕುಮಾರ್, ಡಿ. ಸಿದ್ಧರಾಜು ಮತ್ತಿತರರು ಇದ್ದರು.

ಮರಗಳ ತೆರವಿಗೆ ನಿಯಮಾನುಸಾರ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು. ಪೌರಾಯುಕ್ತರು ಹಾಗೂ ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದು, ಟೆಂಡರ್ ಕರೆದು ಮರಗಳನ್ನು ಕಡಿಯಬೇಕು. ಆದರೆ ಇದ್ಯಾವುದನ್ನೂ ಮಾಡದೆ ಏಕಾಏಕಿ ಮರಗಳನ್ನು ತೆರವುಗೊಳಿಸಿರುವುದು ಅಕ್ರಮ. ಕೇಶವಮೂರ್ತಿ ಬಿಜೆಪಿ ಒಬಿಸಿ ಮೋರ್ಚಾ ತಾಲೂಕು ಅಧ್ಯಕ್ಷ ಪಂಪ್‌ಹೌಸ್‌ನಲ್ಲಿದ್ದ ಮರಗಳ ತೆರವು ವಿಚಾರ ಗಮನಕ್ಕೆ ಬಂದಿದೆ. ನಗರಸಭೆ ಆರೋಗ್ಯ ಹಾಗೂ ಇಂಜಿನಿಯರಿಂಗ್ ಶಾಖೆ ಅಧಿಕಾರಿಗಳಿಗೆ ವಿವರ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಅಕ್ರಮ ಎಂದು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಎಲ್. ಮಂಜುನಾಥಸ್ವಾಮಿ ಪೌರಾಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net