

ಮೈಸೂರು: ತಾಲೂಕಿನ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಂಚ್ಯಾ ಗ್ರಾಮದ ಕೆಂಪೇಗೌಡ ವೃತ್ತದಲ್ಲಿ ಕೆಂಪೇಗೌಡರ ಭಾವಚಿತ್ರವುಳ್ಳ ಬೋರ್ಡನ್ನು ಮುರಿದು ಅಪಮಾನ ಮಾಡಿರುವುದನ್ನು ಖಂಡಿಸಿ ಸ್ಥಳೀಯರು ಬುಧವಾರ ಪ್ರತಿಭಟನೆ ನಡೆಸಿ, ಜತೆಗೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮೈಸೂರು ದಕ್ಷಿಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಗ್ರಾಮದಲ್ಲಿ ಏಳು ವರ್ಷಗಳ ಹಿಂದೆ ವೃತ್ತಕ್ಕೆ ಕೆಂಪೇಗೌಡರ ಹೆಸರು ನಾಮಕರಣ ಮಾಡಲಾಗಿತ್ತು. ಜತೆಗೆ ಕೆಂಪೇಗೌಡರ ಭಾವಚಿತ್ರ ಸಮೇತದ ಬೋರ್ಡ್ ಅಳವಡಿಸಲಾಗಿತ್ತು. ಬಳಿಕ ಸದರಿ ರಸ್ತೆ ಅಗಲೀಕರಣದ ವೇಳೆ ಬೋರ್ಡನ್ನು ಲೋಕೋಪಯೋಗಿ ಇಲಾಖೆಯವರು ತೆರವು ಮಾಡಿದ್ದರು. ಬಳಿಕ ಕೆಂಪೇಗೌಡರ ಜಯಂತಿ ಹಿನ್ನೆಲೆಯಲ್ಲಿ ಜೂನ್ 27 ಸ್ಥಳೀಯರು ಅದೇ ಜಾಗದಲ್ಲಿ ಮತ್ತೆ ಬೋರ್ಡ್ ಅಳವಡಿಸಿದ್ದರು. ಆದರೆ, ಮಂಗಳವಾರ ರಾತ್ರಿ ದುಷ್ಕರ್ಮಿಗಳು ಬೋರ್ಡ್‌ವುಳ್ಳ ಕಂಬವನ್ನು ಮುರಿದು ಹಾಕಿದ್ದಾರೆ. ಈ ಸಂಬಂಧ ಬುಧವಾರ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ದಳ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಆಗಮಿಸಿ ಪರಿಶೀಲನೆ ನಡೆಸಿತು.
ಈ ಸಂಬಂಧ ಹಂಚ್ಯಾ ಗ್ರಾಮದ ಕೆಂಪೇಗೌಡ ವೃತ್ತದಲ್ಲಿ ಜಮಾವಣೆಗೊಂಡ ಸ್ಥಳೀಯರು ಪ್ರಕರಣವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಆರೋಪಿಗಳನ್ನು ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡ ಕೆ.ಎಸ್.ಸಣ್ಣಸ್ವಾಮಿ, ಗ್ರಾಮದ ಮುಖಂಡರಾದ ವಿ.ವೆಂಕಟೇಶ್, ಮಹದೇವು, ಶ್ರೀನಿವಾಸ್, ಕೆಂಪೇಗೌಡರ ಯುವಶಕ್ತಿ ವೇದಿಕೆ ರಾಜ್ಯ ಉಪಾಧ್ಯಕ್ಷ ಸ್ವಾಮಿ, ಪ್ರಮುಖರಾದ ಬೋರೇಗೌಡ, ಚಾಮುಂಡಿ, ನಾಗಣ್ಣ, ಮರಿಯಪ್ಪನ ಸಿದ್ದರಾಜು, ಸಿದ್ದರಾಜು, ಚೆನ್ನಯ್ಯ, ಜೆಡಿಎಸ್ ಮುಖಂಡ ಜೋಗಿ ಸಿದ್ದಯ್ಯ, ಛಲವಾದಿ ಮಹಾಸಭಾ ಮೈಸೂರು ತಾಲೂಕು ಅಧ್ಯಕ್ಷ ಮಾದಪ್ಪ, ಹಂಚ್ಯಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ನಾಗೇಂದ್ರಮೂರ್ತಿ, ಗ್ರಾಮದ ಮುಖಂಡರಾದ ಮಹದೇವು, ಪಟೇಲ್ ಎಚ್.ಎಂ.ಮಲ್ಲಿಕಾರ್ಜುನಪ್ಪ, ಹೋಟೆಲ್ ಸೀನಣ್ಣ, ಲಕ್ಷ್ಮಣಾಚಾರಿ, ಗವಿಸಿದ್ದೇಗೌಡ ಇದ್ದರು.