

ತುಮಕೂರು: ಹಿರೇಹಳ್ಳಿ ಕೈಗಾರಿಕಾ ಪ್ರದೇಶದ ಸಿಪ್ಸ ಟೆಕ್ ಇಂಡಿಯಾ ಪ್ರೈ ಲಿ., ಕಾರ್ಮಿಕ ವಿರೋಧಿ ಧೋರಣೆ ತಾಳಿದ್ದು, ಲಾಕ್‌ಡೌನ್ ಅವಧಿಯಲ್ಲಿ ಸಂಬಳ ನೀಡಿಲ್ಲ ಎಂದು ದೂರಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಎಐಟಿಯುಸಿ ನೇತೃತ್ವದಲ್ಲಿ ಸಮಾವೇಶಗೊಂಡಿದ್ದ ನೂರಾರು ಕಾರ್ಮಿಕರು ವೇತನ ಒಪ್ಪಂದಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬಸವರಾಜು ಮಾತನಾಡಿ, ಸಿಪ್ಸ ಕಾರ್ಖಾನೆ ಕಾರ್ಮಿಕರಿಗೆ ಅನ್ಯಾಯ ಮಾಡಿದ್ದು ಜಿಲ್ಲಾಧಿಕಾರಿ ಮಧ್ಯಸ್ಥಿಕೆ ವಹಿಸಿ ಸಂಬಳ ಹಾಗೂ ಸೌಲಭ್ಯ ಕೊಡಿಸಬೇಕು ಎಂದು ಮನವಿ ಮಾಡಿದರು. ಕಂಪನಿಯಲ್ಲಿ 142ಕ್ಕೂ ಕಾಯಂ ನೌಕರರು, 200ಕ್ಕೂ ಹೆಚ್ಚು ಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದು, ಆಡಳಿತ ವರ್ಗ ಮತ್ತು ಕಾರ್ಮಿಕ ಸಂಘಟನೆ ವೇತನ ಹಾಗೂ ಮತ್ತಿತರ ಸೌಲಭ್ಯಗಳಿಗಾಗಿ ಆಡಳಿತ ವರ್ಗಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು. ಲಾಕ್‌ಡೌನ್‌ಗೂ ಮುಂಚೆಯೇ ಮುಷ್ಕರ ನಡೆಸುವುದಾಗಿ ನೋಟಿಸ್ ನೀಡಿದ ನಂತರ ದೇಶದಲ್ಲಿ ಲಾಕ್‌ಡೌನ್ ವಿಧಿಸಿದ್ದರಿಂದ ಕಾರ್ಮಿಕರು ಮನೆಯಲ್ಲಿಯೇ ಉಳಿಯುವಂತಾಗಿದೆ, ಸರ್ಕಾರ ಲಾಕ್‌ಡೌನ್ ಅವಧಿಯಲ್ಲಿ ಸಂಬಳ ನೀಡುವಂತೆ ಸೂಚಿಸಿದ್ದರೂ ಆಡಳಿತ ಮಂಡಳಿ ಸಂಬಳ ನೀಡಿಲ್ಲ ಎಂದರು.
ಸಿಪ್ಸ ಸಂಸ್ಥೆಯ ಧೋರಣೆ ಖಂಡಿಸಿ ಜೂ.15ರಿಂದ ಕಾರ್ಮಿಕರು ಕಂಪನಿಯ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದು, ಲಾಕ್‌ಡೌನ್ ಅವಧಿಯಲ್ಲಿ ಸಂಬಳ ನೀಡದೆ ಇರುವುದರಿಂದ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಿಪ್ಸ-ಆರ್.ಐಸಿ.ವರ್ಕರ್ಸ್ ಯೂನಿಯನ್ ಜಿಲ್ಲಾಧ್ಯಕ್ಷ ಎನ್.ಶಿವಣ್ಣ ಹೇಳಿದರು. ಜಿಲ್ಲಾ ಉಪಾಧ್ಯಕ್ಷ ಕಂಬೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್‌ಕುಮಾರ್, ಕಾರ್ಯದರ್ಶಿ ಎಸ್.ಸಿ.ಶಿವಾನಂದ, ಜಂಟಿ ಕಾರ್ಯದರ್ಶಿ ನವೀನ್‌ಕುಮಾರ್ ಇದ್ದರು.