

ಹುಬ್ಬಳ್ಳಿ: ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ನಗರದ ದುರ್ಗದಬೈಲ್‌ನಲ್ಲಿ ಮೇಣದಬತ್ತಿ ಬೆಳಗಿ ಶ್ರದ್ಧಾಂಜಲಿ ಸಮರ್ಪಿಸಿದರು.
ರಾಜ್ಯ ಸರ್ಕಾರದ ವೈಫಲ್ಯದಿಂದ ಹತ್ಯೆ ಪ್ರಕರಣಗಳು ನಗರದಲ್ಲಿ ಹೆಚ್ಚುತ್ತಿವೆ. ಅಂಜಲಿ ಮತ್ತು ನೇಹಾ ಹಂತಕರನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿದರು.
ಎರಡೆತ್ತಿನ ಮಠದ ಸದ್ಭಕ್ತ ಮಂಡಳಿ, ಬಡಿಗೇರ ಓಣಿ ಮಹಿಳಾ ಮಂಡಳಿ, ವೀರಾಪೂರ ಓಣಿ ಮಹಿಳಾ ಮಂಡಳ, ಅಗಸರ ಓಣಿ, ಘಂಟಿಕೇರಿ ಓಣಿ, ಮಂಗಳವಾರ ಪೇಟ ಮಹಿಳೆಯರು ಮತ್ತು ಸಾರ್ವಜನಿಕರು ಮೊದಲು ಪ್ರತಿಭಟನಾ ಮೆರವಣಿಗೆ ನಡೆಸಿದರು. ಎರಡೆತ್ತಿನ ಮಠದಿಂದ ಹೊರಟ ಮೆರವಣಿಗೆಯು ದುರ್ಗದಬೈಲ್ ವೃತ್ತಕ್ಕೆ ಬಂದು ತಲುಪಿತು. ನಂತರ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಅವರ ಭಾವಚಿತ್ರದ ಮುಂದೆ ಮೇಣದಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪ್ರಮುಖರಾದ ಜಯದೇವಯ್ಯ ಹಿರೇಮಠ, ಪ್ರಭು ನವಲಗುಂದಮಠ, ಅಂಜಲಿ ಅಜ್ಜಿ ಗಂಗಮ್ಮ ಅಂಬಿಗೇರ, ಸಹೋದರಿಯರಾದ ಯಶೋಧಾ, ಪೂಜಾ ಇತರರು ಇದ್ದರು.