ಪೊಲೀಸರ ಲಾಠಿ ಚಾರ್ಚ್‌ಗೆ ಖಂಡನೆ

04Tmk_BJP_Protest
Published on

ತುಮಕೂರು: ಕೋಲಾರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪರವಾಗಿ ಜಾಗೃತಿ ಜಾಥದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವುದನ್ನು ಖಂಡಿಸಿ ಬಿಜೆಪಿ ನಗರ ಘಟಕ ಪ್ರತಿಭಟನೆ ನಡೆಸಿತು.

ನಗರದ ಡಿವೈಎಸ್‌ಪಿ ಕಚೇರಿ ಮುಂಭಾಗ ಶನಿವಾರ ಸಂಜೆ ಬಿಜೆಪಿ ನಗರಾಧ್ಯಕ್ಷ ಸಿ.ಎನ್.ರಮೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ಸಿಎಎ ಪರ ಶಾಂತಿಯುವ ಜಾಗೃತಿ ಜಾಥಾ ನಡೆಸುತ್ತಿದ್ದವರ ಮೇಲೆ ಏಕಾಏಕಿ ಪೊಲೀಸರು ದೌರ್ಜನ್ಯ ನಡೆಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಸಿ.ಎನ್.ರಮೇಶ್, ದೇಶದ ಭದ್ರತಾ ದೃಷ್ಟಿಯಿಂದ ಪೌರತ್ವ ಕಾಯ್ದೆಯನ್ನು ತಿದ್ದುಪಡಿ ಮಾಡಿರುವುದು ಸ್ವಾಗತಾರ್ಹ ನಿಲುವು. ಆದರೆ, ಇದು ಮುಸ್ಲಿಂ ವಿರೋಧಿ ಅಂತ ಬಿಂಬಿಸಲಾಗುತ್ತಿದೆ. ಈ ಬಗ್ಗೆ ಅರಿವು ಮೂಡಿಸಲು ಜಾಥಾ ನಡೆಸುವ ವೇಳೆ ಪೊಲೀಸರು ಲಾಠಿಚಾರ್ಜ್ ಮಾಡಿರುವುದು ಸರಿಯಲ್ಲ. ಇದು ಖಂಡನೀಯ ಎಂದರು.

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಟಿ.ಎಚ್.ಹನುಮಂತರಾಜು ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತದಲ್ಲಿ ಜಾತ್ಯತೀತತೆಗೆ ದಕ್ಕೆ ಉಂಟಾಗುವುದಿಲ್ಲ ಎಂದು ತಿಳಿಸಿದರು. ಕಾರ್ಮಿಕ ಪ್ರಕೋಷ್ಠದ ಕೊಪ್ಪಲ್ ನಾಗರಾಜ್, ಪಾಲಿಕೆ ಸದಸ್ಯರಾದ ಗಿರಿಜಾ, ಎಚ್.ಮಲ್ಲಿಕಾರ್ಜುನಯ್ಯ, ವಿಷ್ಣುವರ್ಧನ್, ಮಂಜುನಾಥ್, ಪಕ್ಷದ ಮುಖಂಡರಾದ ನಂಜುಂಡಸ್ವಾಮಿ, ಅಣೆತೋಟದ ಶ್ರೀನಿವಾಸ್, ಭಾರತಿರಾಜ್, ರಾಜಣ್ಣ, ಹನುಮಂತರಾಜು, ಬಂಬು ಮೋಹನ್, ನಾಗೇಂದ್ರ, ಬಂಡೇಪಾಳ್ಯ ಶಿವಕುಮಾರ್, ಅಕ್ಷಯ್ ಚೌಧರಿ, ಮನು, ರುದ್ರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net