

ದಾವಣಗೆರೆ: ನಗರದ ಎಂಸಿಸಿ ಬಿ ಬ್ಲಾಕ್‌ನ ಕನ್ನಡವನದಲ್ಲಿ ನಿರ್ಮಿಸಿದ್ದ ಧ್ವಜಸ್ತಂಭ ಧ್ವಂಸಗೊಳಿಸಿರುವುದನ್ನು ಕರುನಾಡ ಕನ್ನಡ ಸೇನೆ ಮತ್ತು ಕನ್ನಡ ಪರ ಸಂಘಟನೆಗಳು ಖಂಡಿಸಿವೆ.
ಪಾರ್ಕ್‌ನಲ್ಲಿ ದಿ.ಪುನೀತ್ ರಾಜ್‌ಕುಮಾರ್ ಅವರ ಪ್ರತಿಮೆ ಮುಂದೆ ಧ್ವಜಸ್ತಂಭದ ಮೇಲೆ ಕನ್ನಡ ಬಾವುಟವಿದ್ದರೂ ಸ್ಥಳೀಯ ಪಾಲಿಕೆ ಸದಸ್ಯರ ಆದೇಶದ ಮೇರೆಗೆ ಸ್ತಂಭ ಒಡೆದು ಹಾಕಲಾಗಿದೆ ಎಂದು ಸೇನೆ ಅಧ್ಯಕ್ಷ ಕೆ.ಟಿ. ಗೋಪಾಲಗೌಡ ಹಾಗೂ ಗಿರೀಶ್ ಎಸ್. ದೇವರಮನೆ ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಕರುನಾಡ ಕನ್ನಡ ಸೇನೆಯು ಉದ್ಯಾನವನದಲ್ಲಿ ದಶಕಗಳಿಂದ ಬಿದ್ದಿದ್ದ ಕಸದ ರಾಶಿ ಸ್ಥಳವನ್ನು ಸ್ವಂತ ಹಣದಿಂದ ಸ್ವಚ್ಛಗೊಳಿಸಿ ನೂರಾರು ಗಿಡಗಳನ್ನು ಬೆಳೆಸಿದೆ. ಕವಿಗಳು ಹಾಗೂ ಸಾಹಿತಿಗಳ ಚಿತ್ರಗಳೊಂದಿಗೆ ಗೋಡೆ ಬರಹ ಬರೆಸಿ ಸುಂದರಗೊಳಿಸಿದೆ. ಹೀಗಿದ್ದರೂ ಕನ್ನಡವನದ ಹೆಸರನ್ನು ಅಳಿಸಿ ಹಾಕಲಾಗಿದೆ ಎಂದು ತಿಳಿಸಿದರು.
ಶ್ರೀನಿವಾಸ ಶ್ರೇಷ್ಟಿ ಉದ್ಯಾನವನಕ್ಕೆ ನ್ಯಾಯಾಲಯದಿಂದ ಪರ್ಮನೆಂಟ್ ಇಂಜೆಕ್ಷನ್ ಮತ್ತು ಡಿಕ್ರಿ ಆದೇಶವಿದ್ದರೂ ಧ್ವಜಸ್ತಂಭ ಒಡೆದುಹಾಕಿ ಸರಿಪಡಿಸುವ ಕೆಲಸ ಮಾಡಲಾಗಿದೆ. ಇದು ಕನ್ನಡ ಹಾಗೂ ಕನ್ನಡಿಗರಿಗೆ ಮಾಡಿರುವ ಅವಮಾನ. ಈ ಬಗ್ಗೆ ಜಿಲ್ಲಾ ಸಚಿವರ ಗಮನಕ್ಕೆ ತರಲಾಗುವುದು ಹಾಗೂ ಎಸ್ಪಿಗೆ ದೂರು ನೀಡಲಾಗುವುದು ಎಂದರು.
ಪಾಲಿಕೆಯಲ್ಲಿ ಪುನೀತ್ ಕನ್ನಡವನ ಎಂದು ಹೆಸರಿಡಲು ನಿರ್ಣಯ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಎನ್. ರಾಜೇಂದ್ರ ಬಂಗೇರ, ಎಂ.ಜಿ. ಶ್ರೀಕಾಂತ್, ಕೆ.ಎನ್. ವೆಂಕಟೇಶ್, ಪಿ. ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.