ವ್ಯಾಪಾರಿಗಳ ಕಾಸಲ್ಲಿ ಕಾಂಕ್ರೀಟ್ ರಸ್ತೆ

1
Published on

ಪುರಸಭೆ, ಮುಜರಾಯಿ ಇಲಾಖೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕರಿಂದ ಆಕ್ಷೇಪ

ದೇವನಹಳ್ಳಿ: ಪಟ್ಟಣದ ಹಳೇ ಬಸ್ ನಿಲ್ದಾಣದ ಸಂತೆಯ ಮಧ್ಯೆ ಹಾದು ಹೋಗುವ ಹಳ್ಳ, ಕೊಳಚೆಯ ರಸ್ತೆಯನ್ನು ದುರಸ್ತಿ ಮಾಡಿಸುವಂತೆ ದಶಕಗಳಿಂದ ಸಾರ್ವಜನಿಕರು ಪುರಸಭೆಗೆ ಹಾಗೂ ಮುಜಾರಾಯಿ ಇಲಾಖೆಗೆ ಒತ್ತಾಯಿಸಿದ್ದರೂ ಫಲ ನೀಡದೆ ಇದ್ದಾಗ ವಾರದ ಸಂತೆಯ ಬೀದಿಬದಿ ವ್ಯಾಪಾರಿಗಳೇ ಸೇರಿಕೊಂಡು ಬುಧವಾರ ಸಂತೆ ರಸ್ತೆಗೆ ಕಾಂಕ್ರೀಟ್ ಹಾಕಲು ಕ್ರಮ ಕೈಗೊಂಡಿದ್ದಾರೆ.


ಇಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಪ್ರತಿ ಬುಧವಾರ ವಾರದ ಸಂತೆ ನಡೆಯುತ್ತಿದೆ. ಸುತ್ತಮುತ್ತಲ ಹಳ್ಳಿಗಳ ಜನ ಬಂದು ತಮಗೆ ಬೇಕಾದ ದಿನಸಿ ತರಕಾರಿ ಮತ್ತಿತರ ವಸ್ತುಗಳನ್ನು ಖರೀದಿಸುತ್ತಾರೆ. 25 ವರ್ಷಗಳಿಗೂ ಹಿಂದೆ ಪುರಸಭೆ ಇದರ ನಿರ್ವಹಣೆ ಮಾಡಿ ನೆಲವಹಿ ಸುಂಕವನ್ನು ವ್ಯಾಪಾರಿಗಳಿಂದ ವಸೂಲಿ ಮಾಡುತ್ತಿದೆ, ಆದರೆ, 20 ವರ್ಷಗಳಿಂದೀಚೆಗೆ ಇದು ಮುಜರಾಯಿ ಇಲಾಖೆಯ ಶ್ರೀರಂಗನಾಥಸ್ವಾಮಿ ದೇವಾಲಯದ ಆಸ್ತಿಯಾದ ಹಿನ್ನೆಲೆಯಲ್ಲಿ ಇದರ ಸುಂಕ ವಸೂಲಿ ಹಣ ದೇವಾಲಯದ ಅಭಿವೃದ್ಧಿಗೆ ಸೀಮಿತವಾಗಬೇಕೆಂದು ತಕರಾರು ಇತ್ತು. ಬಳಿಕ ಪುರಸಭೆಯವರು ನಿರ್ವಹಣೆ ಮತ್ತು ಸುಂಕ ವಸೂಲಿ ಮತ್ತು ಕಸ ತೆಗೆಯುವುದನ್ನು ಕೈಬಿಟ್ಟಿದ್ದರು. ಈ ಪರಿಣಾಮ ಇಲ್ಲಿ ಕೊಳಚೆ ನಡುವೆಯೇ ವಾರದ ಸಂತೆ ನಡೆಯುತ್ತಿತ್ತು. ಮಳೆ ಬಂದರೆ ಸಂತೆಯ ಒಳಗೆ ರಚ್ಚೆ ರಾಡಿಯಾಗಿ ಓಡಾಟಕ್ಕೂ ಸಂಕಷ್ಟ ಪಡಬೇಕಾದ ದುಸ್ಥಿತಿಯನ್ನು ಟೌನ್ ನಿವಾಸಿಗಳು ಎದುರಿಸಬೇಕಿತ್ತು.

ಇದರ ಜತೆಗೆ ಒಂದೆರಡು ವರ್ಷಗಳಿಂದ ಭಾನುವಾರವೂ ಸಂತೆ ವ್ಯಾಪಾರ ನಡೆಯುತ್ತಿದೆ. ಸಂತೆಗೆ ಬರುವ ಗ್ರಾಹಕರು ಕೊಳಕು ವಾಸನೆಗೆ ಮೂಗು ಮುಚ್ಚಿಕೊಂಡು ವ್ಯಾಪಾರಕ್ಕೆ ಬರಬೇಕಿತ್ತು. ಇದರಿಂದ ಬೇಸತ್ತ ವ್ಯಾಪಾರಿಗಳೆಲ್ಲ ಸೇರಿ ಹಣ ಸಂಗ್ರಹಿಸಿ, ತಾವೇ ಕಾಂಕ್ರಿಟ್ ಹಾಕಿಸಲು ಮುಂದಾಗಿದ್ದಾರೆ. ವಾರಕ್ಕೊಮ್ಮೆ ಸಂತೆಯಲ್ಲಿ ಅಂಗಡಿ ಇಟ್ಟು, ವ್ಯಾಪಾರ ಮಾಡುವವರು ಯಾವುದೇ ನೆಲೆ ಇಲ್ಲ, ಸ್ವಚ್ಛತೆಯೂ ಮರೀಚಿಕೆಯಾಗಿ ಕೊಚ್ಚೆ ರಸ್ತೆಯಲ್ಲಿಯೇ ತರಕಾರಿಗಳನ್ನು ಇಟ್ಟು ವ್ಯಾಪಾರ ಮಾಡಬೇಕಾಗಿತ್ತು. ಇದನ್ನು ಸರಿಪಡಿಸುವಂತೆ ಪುರಸಭೆಯನ್ನು ಒತ್ತಾಯ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಜನ ಕೊಚ್ಚೆಯಲ್ಲಿ ಕಾಲಿಟ್ಟು, ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದದ್ದನ್ನು ಗಮನಿಸಿದ ಸ್ಥಳೀಯರು, ಪುರಸಭೆ ನಂಬಿದರೆ ಅಭಿವೃದ್ಧಿಯಾಗುವುದಿಲ್ಲ, ಯಾವ ರಾಜಕೀಯ ವ್ಯಕ್ತಿಯೂ ಕಾಮಗಾರಿ ಮಾಡಿಸುವುದಿಲ್ಲ ಎಂಬುದನ್ನು ಮನಗೊಂಡು ಜನರೇ ರಸ್ತೆ ನಿರ್ಮಿಸಿ ಸೆಡ್ಡು ಹೊಡೆದಿದ್ದಾರೆ.


ಜಾಗ ನಮ್ಮದಲ್ಲ ಸುಂಕ ಕೊಡಿ: ವಾರಕ್ಕೆ ಎರಡು ಬಾರಿ ಇಲ್ಲಿ ಸಂತೆಯಾಗುತ್ತದೆ. ವ್ಯಾಪಾರಸ್ಥರು, ಗ್ರಾಹಕರ ಸುರಕ್ಷತೆಯನ್ನು ಕಾಪಾಡಲು ಯಾವ ಅಧಿಕಾರಿ, ಜನಪ್ರತಿನಿಧಿಯೂ ಮನಸ್ಸು ಮಾಡಲೇ ಇಲ್ಲ. ಈ ಜಾಗವೂ ರಂಗನಾಥ ಸ್ವಾಮಿ ದೇಗುಲಕ್ಕೆ ಸೇರಿದ್ದು, ಪುರಸಭೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಹಾರಿಕೆ ಉತ್ತರ ನೀಡಿ ಅನಕ್ಷರಸ್ಥ ಬಡ ವ್ಯಾಪಾರಿಗಳ ಕಣ್ಣಿಗೆ ಮಣ್ಣು ಹಾಕುತ್ತಿದ್ದಾರೆ. ಆದರೆ ಸುಂಕ ವಸೂಲಿಗೆ ಮಾತ್ರ ಮೊದಲು ಬರುತ್ತಾರೆ. ಈ ಜಾಗದ ವ್ಯಾಜ್ಯ ಏನೇ ಇದ್ದರೂ, ತಾತ್ಕಲಿಕವಾಗಿ ಆದರೂ ಪರಿಹಾರ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರು ಇಚ್ಛಾಶಕ್ತಿ ತೋರಿಸಬೇಕು ಎಂದು ಸಂತೆ ವ್ಯಾಪಾರಸ್ಥ ಸೊಪ್ಪು ಮುನಿರಾಜು ಆಗ್ರಹಿಸಿದ್ದಾರೆ.

ಮೊದಲು ಪುರಸಭೆಯಿಂದ ನಿರ್ವಹಣೆ ಮಾಡಲಾಗುತ್ತಿತ್ತು. ಈಗ ಅದು ಮುಜರಾಯಿಗೆ ಸೇರಿದ್ದು ಎಂದ ಬಳಿಕ ನಾವು ಅದರ ವಿಚಾರವಾಗಿ ಗಮನಿಸಿಲ್ಲ. ವ್ಯಾಪಾರಿಗಳೇ ಸಿಸಿ ರಸ್ತೆ ಮಾಡುತ್ತಿರುವ ವಿಚಾರವನ್ನು ತಹಸೀಲ್ದಾರ್ ಗಮನಕ್ಕೆ ತರುತ್ತೇನೆ.ಸಿ.ದೊಡ್ಡಮಲವಯ್ಯ ಪುರಸಭಾ ಮುಖ್ಯಾಧಿಕಾರಿ

ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಡುವ ಸಂತೆ ಮೈದಾನದಲ್ಲಿ ವ್ಯಾಪಾರಿಗಳು ಸಿಸಿ ರಸ್ತೆ ಮಾಡುತ್ತಿರುವ ವಿಚಾರ ನನ್ನ ಗಮನಕ್ಕೆ ತಂದಿದ್ದಾರೆ. ನಾನು ಈ ಬಗ್ಗೆ ಮುಜರಾಯಿ ತಹಸೀಲ್ದಾರ್ ಜತೆಗೂಡಿ ಸ್ಥಳ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ.ಬಾಲಕೃಷ್ಣ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net