

ಸುಬ್ರಹ್ಮಣ್ಯ: ಎರಡು ವರ್ಷಗಳ ಹಿಂದೆ ಪ್ರಾಕೃತಿಕ ವಿಕೋಪದಿಂದ ಕುಸಿದಿದ್ದ ಹರಿಹರ ಪಲ್ಲತ್ತಡ್ಕ ಸೇತುವೆಯ ತಡೆಗೋಡೆಯನ್ನು ಮರಳಿ ನಿರ್ಮಿಸಲಾಗಿದೆ. ತಡೆಗೋಡೆಯಿಲ್ಲದೆ ಮಳೆಗಾಲದಲ್ಲಿ ಅಪಾಯ ಸಂಭವಿಸುವ ಸಾಧ್ಯತೆಯಿತ್ತು.
ಭಾರಿ ಮಳೆಗೆ ಕಲ್ಮಕಾರು ಭಾಗದಿಂದ ಹರಿದು ಬರುವ ಹೊಳೆಯಲ್ಲಿ ಪ್ರವಾಹ ಉಂಟಾಗಿ ಹರಿಹರ ಪಲ್ಲತ್ತಡ್ಕ ಪೇಟೆಗೆ ನೆರೆ ನೀರು ನುಗ್ಗಿತ್ತು. ಪರಿಣಾಮ ಪೇಟೆಯ ಎರಡು ಅಂಗಡಿಗಳು ಸಹಿತ ಸೇತುವೆ ಸಮೀಪದ ರಸ್ತೆ ಬದಿ ಕುಸಿತ ಸಂಭವಿಸಿತ್ತು. ಕಳೆದ ವಷರ್ ಇಲ್ಲಿ ಅಲ್ಪ ಕಾಮಗಾರಿ ನಡೆಸಲಾಗಿದ್ದರೂ, ಹೊಳೆಯ ಒಂದು ಭಾಗದಲ್ಲಿ ತಡೆಗೋಡೆ ನಿರ್ಮಾಣಗೊಂಡಿರಲಿಲ್ಲ. ಈ ವರ್ಷ ತಡೆಗೋಡೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ.
ಅಂದು ಹಾನಿಗೀಡಾದ ಹಲವೆಡೆ ಇನ್ನೂ ಪರಿಹಾರ ಕಾಮಗಾರಿಗಳು ನಡೆಯಬೇಕಾಗಿದ್ದು, ಅದನ್ನೂ ಶೀಘ್ರ ಮಾಡಲಿ ಎಂದು ಸ್ಥಳೀಯರು ಕೋರಿದ್ದಾರೆ. ಇಲ್ಲಿನ ಸಮಸ್ಯೆ ಬಗ್ಗೆ ವಿಜಯವಾಣಿ ವರದಿ ಪ್ರಕಟಿಸಿತ್ತು.