ಕುಣಿತ ಭಜನಾ ತರಬೇತಿ ಕಮ್ಮಟ ಸಮಾರೋಪ

bhajane-1
ಮುದ್ರಾಡಿಯಲ್ಲಿ ಒಂದು ತಿಂಗಳ ಕಾಲ ಕುಣಿತ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭ ನಡೆಯಿತು
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಧ್ಯಾನ, ಯಜ್ಞ, ಅರ್ಚನೆಗೆ ಸಮನಾದ ಫಲ ಕಲಿಯುಗದಲ್ಲಿ ಹರಿಸಂಕೀರ್ತನೆಗೆ ಇದೆ. ತಾಳ, ಲಯಕ್ಕೆ ಸರಿಯಾಗಿ ಹೆಜ್ಜೆ ಹಾಕುತ್ತಾ ಭಕ್ತಿ ಭಾವದಿಂದ ದೇವರನ್ನು ನೆನೆದಾಗ ಮಾನಸಿಕ ಶಾಂತಿ, ನೆಮ್ಮದಿ ದೊರಕುತ್ತದೆ ಎಂದು ಮುದ್ರಾಡಿ ಪ್ರೌಢಶಾಲೆ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಹೇಳಿದರು.
ಮುದ್ರಾಡಿ ಸಮುದಾಯ ಭವನದಲ್ಲಿ ತಿಂಗಳ ಕಾಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ವತಿಯಿಂದ ನಡೆದ ಕುಣಿತ ಭಜನಾ ತರಬೇತಿ ಕಮ್ಮಟದ ಸಮಾರೋಪದಲ್ಲಿ ಮಾತನಾಡಿದರು.

ಭಜನೆ ಹಾಡಿದರೆ ಸುತ್ತಮುತ್ತಲ ಪ್ರದೇಶದಲ್ಲಿರುವ ದುಷ್ಟಶಕ್ತಿಗಳು ದೂರಹೋಗುತ್ತದೆ. ಮನೆಮನಗಳ ವಾತಾವರಣ ಸ್ವಚ್ಛವಾಗಿರುತ್ತದೆ. ರೋಗರುಜಿನಗಳು, ಸಂಸಾರ ತಾಪತ್ರಯಗಳು ಕಡಿಮೆಯಾಗಿ, ಒತ್ತಡ ದೂರವಾಗಿ ಸುಂದರ ಬದುಕು ನಮ್ಮದಾಗುತ್ತದೆ ಎಂದರು.

ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಮಂಜುನಾಥ ಪೂಜಾರಿ ಅಧ್ಯಕ್ಷತೆ ವಹಿಸಿ, ಧಾರ್ಮಿಕ ನೆಲೆವೀಡಾದ ಮುದ್ರಾಡಿಯಲ್ಲಿ ಹಲವಾರು ಭಜನಾ ತಂಡ ಕಾರ್ಯನಿರ್ವಹಿಸುತ್ತಿದ್ದು ಎಲ್ಲ ಶುಭ ಸಮಾರಂಭಗಳಲ್ಲಿ ಭಜನಾ ಕಾರ್ಯಕ್ರಮ ನಡೆಸುವ ಮೂಲಕ ನಾವೆಲ್ಲರೂ ನಮ್ಮ ಪರಂಪರೆ, ಆಚಾರ ವಿಚಾರ ಉಳಿಸಿಕೊಳ್ಳೋಣ. ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಕ್ಕಳಿಗೆ ತರಬೇತಿ ನೀಡುತ್ತಿರುವುದು ಶ್ಲಾಘನೀಯ. ಇಂತಹ ತರಬೇತಿಗಳು ಇಂದಿನ ಮಕ್ಕಳಿಗೆ ಅವಶ್ಯಕವಾಗಿದೆ ಎಂದರು.

ಶಿಬಿರಾರ್ಥಿಗಳಾದ ಕೌಶಿಕ್, ಆರಾಧ್ಯಾ, ಪಾಲಕರಾದ ಪ್ರಮೀಳಾ, ಶ್ಯಾಮಲಾ ಅನಿಸಿಕೆ ವ್ಯಕ್ತಪಡಿಸಿದರು. ತರಬೇತಿ ನೀಡಿದ ಪೂರ್ಣಿಮಾ ಅವರನ್ನು ಅಭಿನಂದಿಸಲಾಯಿತು.

ಮುದ್ರಾಡಿ ವಲಯ ಭಜನಾ ಪರಿಷತ್ ಅಧ್ಯಕ್ಷ ವರಂಗ ಸುರೇಶ್ ಪೂಜಾರಿ, ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಗಣಪತಿ ಎಂ., ಮುದ್ರಾಡಿ ವಲಯಾಧ್ಯಕ್ಷ ರತ್ನಾಕರ ಪೂಜಾರಿ ಮಾತಿಬೆಟ್ಟು, ಭಜನಾ ತರಬೇತುದಾರೆ ಚಾರ ಪೂರ್ಣಿಮಾ, ಬಲ್ಲಾಡಿ ಒಕ್ಕೂಟ ಮಾಜಿ ಅಧ್ಯಕ್ಷ ಹರೀಶ್ ಕುಲಾಲ್, ಶ್ರೀ ರಾಮ ಭಜನಾ ಮಂಡಳಿ ಅಧ್ಯಕ್ಷ ಶುಭಧರ ಶೆಟ್ಟಿ, ಸೇವಾಪ್ರತಿನಿಧಿಗಳಾದ ವನಿತಾ, ಸಂಧ್ಯಾ, ವಾಣಿ, ಹೇಮಾ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಭಜನಾ ಪರಿಷತ್ ಸಮನ್ವಯಾಧಿಕಾರಿ ರಾಘವೇಂದ್ರ ಪೂಜಾರಿ ಪ್ರಾಸ್ತಾವಿಸಿ. ಸೇವಾಪ್ರತಿನಿಧಿ ಮಮತಾ ಸ್ವಾಗತಿಸಿ, ಮುದ್ರಾಡಿ ವಲಯ ಮೇಲ್ವಿಚಾರಕಿ ಸುಮಲತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net