

ಮೈಸೂರು: ಜೆಎಸ್‌ಎಸ್ ಮಹಾವಿದ್ಯಾಪೀಠದ ವತಿಯಿಂದ ನಗರದ ಜೆಎಸ್‌ಎಸ್ ಆಸ್ಪತ್ರೆ ಆವರಣದ ರಾಜೇಂದ್ರ ಭವನದಲ್ಲಿ ಆಯೋಜಿಸಿದ್ದ ಬೇಸಿಗೆ ಚಿತ್ರಕಲಾ ಶಿಬಿರದ ಸಮಾರೋಪ ಸಮಾರಂಭ ಮಂಗಳವಾರ ನಡೆಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಮಾತನಾಡಿ, ಬೇಸಿಗೆ ಶಿಬಿರಗಳು ಮಕ್ಕಳಲ್ಲಿರುವ ಪ್ರತಿಭೆ ಹೊರ ತರಲು ಸಹಕಾರಿಯಾಗಿದೆ. ಈ ಹಿಂದೆ ಮಕ್ಕಳಿಗೆ ಅಜ್ಜಿ ಮನೆಯೇ ಬೇಸಿಗೆ ಶಿಬಿರವಾಗಿತ್ತು. ಆಧುನಿಕ ಯುಗದಲ್ಲಿ ಇದೀಗ ಬೇಸಿಗೆ ಶಿಬಿರ ನಡೆಯುತ್ತಿದೆ ಎಂದರು.
ಆಧುನಿಕ ಶಿಕ್ಷಣದ ನೆಪದಲ್ಲಿ ಮಕ್ಕಳಿಗೆ ಸೃಜನಶೀಲ ಚಟುವಟಿಕೆಗಳನ್ನು ಹೇಳಿಕೊಡುತ್ತಿಲ್ಲ. ಶಾಲೆಗಳಲ್ಲಿ ಕೂಡ ಇದರ ಬಗ್ಗೆ ಗಮನವಿಲ್ಲ. ಹೀಗಾಗಿ ವರ್ಷದಲ್ಲಿ ಒಮ್ಮಾಂದರೂ ಬೇಸಿಗೆ ಶಿಬಿರದ ಮೂಲಕ ಮಕ್ಕಳಿಗೆ ನಮ್ಮ ಸಂಸ್ಕೃತಿ, ಪರಂಪರೆಯನ್ನು ಪರಿಚಯಿಸುತ್ತಿರುವುದು ಸಂತಸದ ವಿಚಾರ ಎಂದರು.
ಶಿಬಿರದಲ್ಲಿ 80 ಮಕ್ಕಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ಡಾ.ವಿಠ್ಠಲರೆಡ್ಡಿ ಚುಳಕಿ, ಎಸ್.ಎಂ. ಜಂಬುಕೇಶ್ವರ, ಜೆಎಸ್‌ಎಸ್ ಕಾಲೇಜು ಶಿಕ್ಷಣ ವಿಭಾಗದ ನಿದೇರ್ಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಹಾಗೂ ಇತರರು ಇದ್ದರು.