

ಮೈಸೂರು: ವಿಶ್ವ ಸಂಕೇತಿ ಭಾರತಿ ಟ್ರಸ್ಟ್ ವತಿಯಿಂದ ಜಯನಗರದ ನಾಚಾರಮ್ಮ ಭವನದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ‘ಸಂಕೇತ ಬರಹಗಾರರ ರಾಜ್ಯ ಮಟ್ಟದ ಪ್ರಥಮ ಸಾಹಿತ್ಯ ಸಮ್ಮೇಳನ’ ಭಾನುವಾರ ಸಮಾಪ್ತಿಗೊಂಡಿತು.
ಅಂತಿಮ ದಿನ ಕವಿಗೋಷ್ಠಿ, ಪುಸ್ತಕ ಬಿಡುಗಡೆ, ಹಿರಿಯ ಸಾಧಕರಿಗೆ ಸನ್ಮಾನ, ವಿಚಾರಗೋಷ್ಠಿ ಸೇರಿದಂತೆ ನಾನಾ ಕಾರ್ಯಕ್ರಮಗಳು ಸಮ್ಮೇಳನಕ್ಕೆ ಮೆರುಗು ನೀಡಿದವು.
ರಾಜಾರಾಮಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ 20 ಕವಿಗಳು ಭಾಗವಹಿಸಿದ್ದರು. ಕವಿಗಳಾದ ರಾಸೋ, ಅನುರಾಧ ರಾಮಮೂರ್ತಿ, ಜಾನಿ, ಮಂಜುಳಾ ರಾಮು, ವಸಂತ ನಾಗರಾಜ್, ನಾ.ಗುರುದತ್ತ, ಎನ್.ಕೆ.ಪ್ರಸಾದ್, ಪ್ರೇಮಾ ಪ್ರಶಾಂತ್, ಪ್ರಶಾಂತ್ ಅಗ್ರಹಾರ, ಪ್ರಣತಿ ಪಿ.ಹರಿತ್ಸಾ, ಚಿಲಕುಂದ ನಾಗಪ್ಪಶಾಸ್ತ್ರೀ ನಾಗಶಯನ, ಬೀರೂರು ನಾಗೇಶ್ ಜೋಯ್ಸ, ಸವಿತಾ ರಾಮನಾಥ್, ಹೇಮಾ ರಮೇಶ್, ತಾರಾಪ್ರಸಾದ್, ಸ್ವರಾ, ಕುಶಕುಮಾರ್ ಬಸವಾಪಟ್ಟಣ, ಎಚ್.ವಿ.ತಾರಾಮಣಿ, ಶಶಿಕಲಾ ಜೋಯಿಸ್, ನಾಗ ಅನಂತಚಂದ್ರ ನಾರಾಯಣ ಕವಿತೆ ವಾಚಿಸಿದರು.
‘ಮಕ್ಕಳ ಸಾಹಿತ್ಯ, ನಾಟಕ ಸಂಗೀತ ಮತ್ತು ಸಂಕೇತಿ ಸಾಹಿತ್ಯದ ಮುನ್ನೋಟ’ ವಿಷಯ ಕುರಿತು ವಿಚಾರಗೋಷ್ಠಿ ನಡೆಯಿತು. ಹಿರಿಯ ಸಾಹಿತಿ ಮತ್ತೂರು ಸುಬ್ಬಣ್ಣ ‘ಮಕ್ಕಳ ಸಾಹಿತ್ಯ’ದ ಬಗ್ಗೆ, ‘ನಾಟಕ’ ವಿಷಯ ಕುರಿತು ಡಾ.ಮೀರಾ ಮೂರ್ತಿ, ‘ಸಂಗೀತ’ ವಿಷಯದ ಕುರಿತು ಡಾ.ಆರ್.ಕೆ.ಪದ್ಮನಾಭ ಹಾಗೂ ‘ಸಂಕೇತಿ ಸಾಹಿತ್ಯದ ಮುನ್ನೋಟ’ ವಿಷಯ ಕುರಿತು ಸಂಸ್ಕೃತಿ ಸುಬ್ರಹ್ಮಣ್ಯ ವಿಚಾರ ಮಂಡಿಸಿದರು.
ಇದೇ ವೇಳೆ ವಿವಿಧ ಲೇಖಕರ ‘ಕನ್ನಡ ಮಾತೆಯ ಕಣ್ಮಣಿಗಳು’, ‘ಮೂವತ್ತು ದಿನಗಳಲ್ಲಿ ಸಂಕೇತಿ ಕಲಿಯಿರಿ’, ‘ಸುವರ್ಣಗಾನ’, ‘ಸಂಕೇತಿ ವ್ಯವಹಾರ ಸಾಹಸ್ರೀ’, ‘ನಿಘಂಟು ರಸನಿಮಿಷ’, ‘ಷೆರ್ಲಾಕ್ ಹೋಮ್ಸ್ ಭುವಂಗತಃ’, ಅಂಶು ಮತ್ತು ರೋಬೋ ಸಾಹಸ’, ‘ಓ ಹೆನ್ರಿಯ ಆಯ್ದ ಸಣ್ಣಕತೆಗಳು’, ‘ಕೃಷ್ಣಾಯಣ’, ‘ಶಿವಾಜಿ ಸಹಕಾರಿ ಬಾಲಾಜಿ ಅವಾಜಿ’, ‘ಪುಟ್ಟಮಕ್ಕಳಿಗಾಗಿ ಪಂಚತಂತ್ರ’, ‘ಜೇನುಗೂಡು’ ಸೇರಿದಂತೆ ಅನೇಕ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಎಸ್.ಜಿ.ಕೃಷ್ಣಮೂರ್ತಿ, ಎಲ್.ಸಿ.ಆನಂದಮೂರ್ತಿ, ಆರ್.ಎನ್.ತ್ಯಾಗರಾಜನ್, ಆರ್.ಎನ್.ತಾರಾನಾಥನ್, ಡಾ.ಬಿ.ಚೆನ್ನಕೇಶವ ಅವರನ್ನು ಸನ್ಮಾನಿಸಲಾಯಿತು.
ಸಮ್ಮೇಳನದ ಸರ್ವಾಧ್ಯಕ್ಷ ಡಾ.ಕೆ.ಅನಂತರಾಮು, ಸಾಹಿತಿ ಡಾ.ಬಿ.ಎಸ್.ಪ್ರಣತಾರ್ತಿಹರನ್ , ಸಂಚಾಲಕರಾದ ಸಂಸ್ಕೃತಿ ಸುಬ್ರಹ್ಮಣ್ಯ, ನಾಗರಾಜ ಹೊಸಹಳ್ಳಿ, ಸರೋಜಾ ಹಿರಿಯಣ್ಣ, ಕೋಶಾಧ್ಯಕ್ಷ ಪ್ರೊ.ಆರ್.ಎನ್.ಪದ್ಮನಾಭ, ಎಂ.ಬಿ.ಭಾನುಪ್ರಕಾಶ್, ಡಾ.ಕೆ.ಎಸ್.ನಾಗರಾಜ, ಆರ್.ಎಸ್.ಭಾಸ್ಕರ ಅವಧಾನಿ, ಡಾ.ಆರ್.ಕೆ.ಪದ್ಮನಾಭ ಮತ್ತಿತರರಿದ್ದರು.