

ಮಂಡ್ಯ: ಇತ್ತೀಚಿನ ದಿನಗಳಲ್ಲಿ ನಾಟಕಗಳ ಅಭಿರುಚಿ ಕಡಿಮೆಯಾಗುತ್ತಿದೆ. ಯುವ ಪೀಳಿಗೆ ಮೊಬೈಲ್ನಲ್ಲಿ ಮುಳುಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಬೇಸರ ವ್ಯಕ್ತಪಡಿಸಿದರು.
ನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಭೂಮಿ ಬೆಳಗು ಸಾಂಸ್ಕೃತಿಕ ಸಂಘ ಮಂಗಲ ವತಿಯಿಂದ ಆಯೋಜಿಸಿದ್ದ ನೀನಾಸಂ ತಿರುಗಾಟ ನಾಟಕ, ಜಿಲ್ಲೆಯ ಮೊದಲ ಲೋಕಸಭಾ ಸದಸ್ಯ ದಿ.ಎಂ.ಕೆ.ಶಿವನಂಜಪ್ಪ ಅವರಿಗೆ ರಂಗನಮನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಯುವ ಪೀಳಿಗೆ ನಾಟಕಗಳಿಂದ ಬಹಳಷ್ಟು ವಿಷಯಗಳನ್ನು ಕಲಿಯಬಹುದು. ಚಿಕ್ಕವರಾಗಿದ್ದಾಗ ರಾಮಾಯಣ, ಮಹಾಭಾರತ, ಭಗವದ್ಗೀತೆಗಳನ್ನು ನಾಟಕಗಳ ಮೂಲಕ ನೋಡಿ ಕಲಿಯುತ್ತಿದ್ದೆವು. ಆದರೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ ಎಂದು ಹೇಳಿದರು
ನಮ್ಮ ಸಂಸ್ಕೃತಿಯಲ್ಲಿ ನಾಟಕಗಳು ಬಹಳ ಪ್ರಮುಖ ಪಾತ್ರ ವಹಿಸಿವೆ. ಮುಖ್ಯವಾಗಿ ನಟರು ಸಿನಿಮಾರಂಗಕ್ಕೆ ಬರುವ ಮೊದಲು ರಂಗಭೂಮಿಯ ನಾಟಕದಲ್ಲಿ ಸೇವೆ ಸಲ್ಲಿಸಿದ್ದಾರೆ. ನಾಟಕದಲ್ಲಿ ನಟನೆ ಮಾಡುವುದು ಬಹಳ ಕಷ್ಟದ ಕೆಲಸ. ಸಿನಿಮಾಗಳಲ್ಲಿ ಸಾಕಷ್ಟು ತಂತ್ರಜ್ಞಾನದ ಮೂಲಕ ತೋರಿಸಬಹುದು. ಆದರೆ ನಾಟಕದಲ್ಲಿ ನೈಜ ಪ್ರದರ್ಶನವಿರಬೇಕು ಎಂದರು.
ಹಿರಿಯ ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಮಾತನಾಡಿ, ಮಂಡ್ಯದ ತ್ರಿಮೂರ್ತಿಗಳು ಎಂದು ಪರಿಗಣಿಸಲ್ಪಟ್ಟಿರುವ ಕೆ.ವಿ.ಶಂಕರಗೌಡ, ಎಂ.ಕೆ.ಶಿವನಂಜಪ್ಪ, ಡಾ.ಜಿ.ಮಾದೇಗೌಡ ಅವರನ್ನು ನೆನಪು ಮಾಡಿಕೊಳ್ಳಬೇಕು. ಮಂಡ್ಯದ ಇತಿಹಾಸ ಗಮನಿಸಿದಾಗ ಅವತಾರ ಪುರುಷರಾಗಿ ಈ ಮೂವರು ಕಣ್ಣೆದುರು ಕಾಣಿಸಿಕೊಳ್ಳುತ್ತಾರೆ ಎಂದು ಹೇಳಿದರು.
ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ವಿಶ್ರಾಂತ ಪ್ರಾದೇಶಿಕ ಪ್ರಬಂಧಕ ಆನಂದ್ ಸಿ.ಹೆಗಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಯುವ ಮುಖಂಡ ಗುರುಕುಮಾರ್, ಸಂಘದ ಅಧ್ಯಕ್ಷ ಮಂಗಲ ಎಂ.ಯೋಗೀಶ್, ಉಪಾಧ್ಯಕ್ಷ ಲಿಂಗಪ್ಪ ಚನ್ನನಕೆರೆ, ಕಾರ್ಯದರ್ಶಿ ನಂಜುಂಡಸ್ವಾಮಿ ಇದ್ದರು. ನಂತರ ನೀನಾಸಂ ತಂಡದಿಂದ ಅಂಕದ ಪರದೆ ನಾಟಕ ಪ್ರದರ್ಶನ ನಡೆಯಿತು.