ವಿಶ್ವ ಪರಂಪರಾ ಸಪ್ತಾಹದ ಸಮಾರೋಪ ಸಮಾರಂಭ, ಭಾರತೀಯ ಪರಂಪರೆ ಉಳಿಸಿ-ಬೆಳೆಸೋಣ ಎಂದ ಮಲ್ಲಿಕಾರ್ಜುನ ಬಜಂತ್ರಿ

HERITAG WEEK
ವಿಜಯಪುರ ಗೋಳಗುಮ್ಮಟ ಆವರಣದಲ್ಲಿ ವಿಶ್ವ ಪರಂಪರಾ ಸಪ್ತಾಹದಂಗವಾಗಿ ಹಮ್ಮಿಕೊಂಡಿದ್ದ ಚಿತ್ರಕಲೆ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಲ್ಲಿಕಾರ್ಜುನ ಬಜಂತ್ರಿ, ಎನ್. ಪ್ರಸನ್ನಕುಮಾರ್, ವಿ.ಆರ್ ಕುಲಕರ್ಣಿ ಇದ್ದಾರೆ.
Published on

ವಿಜಯಪುರ: ಭಾರತೀಯ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಜಂತ್ರಿ ಹೇಳಿದರು.

ನಗರದ ಗೋಳಗುಮ್ಮಟ ಆವರಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಧಾರವಾಡ ವಲಯದಿಂದ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಪರಂಪರಾ ಸಪ್ತಾಹದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಮ್ಮ ಸಾಂಸ್ಕೃತಿಕ ಸಂಪತ್ತುನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ನಮ್ಮ ಪರಂಪರೆ ರಕ್ಷಿಸುವ ಜವಾಬ್ದಾರಿ ನಮ್ಮ ನಿಮ್ಮಲ್ಲರ ಹೊಣೆ. ಅದರಲ್ಲೂ ವಿಶೇಷವಾಗಿ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯವಾದುದು. ಹೀಗಾಗಿ ವ್ಯಾಪಕ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಪುರಾತತ್ವ ಇಲಾಖೆ ಸಹಾಯಕ ಅಧಿಕಾರಿ ಎನ್. ಪ್ರಸನ್ನಕುಮಾರ್ ಮಾತನಾಡಿ, ಪ್ರಸ್ತುತ ವಿಶ್ವಪರಾಂಪರಿಕ ತಾಣಗಳ ಪಟ್ಟಿಯಲ್ಲಿ ಕರ್ನಾಟಕದ ಮೂರು ತಾಣಗಳನ್ನು ಕಾಣಬಹುದು. ಈ ತಾಣಗಳ ಸಂರಕ್ಷಣೆ, ಸ್ವಚ್ಛತೆಯನ್ನು ಕಾಪಾಡಿಕೊಂಡು ಹೋಗುವುದು ನಮ್ಮಲ್ಲರ ಹೊಣೆ ಎಂದರು.

ಸಂರಕ್ಷಣಾ ಅಧಿಕಾರಿ ವಿಜಯಕುಮಾರ್ ಮಾತನಾಡಿದರು. ಎಸ್.ಬಿ. ಬಿರಾದಾರ ನಿರೂಪಿಸಿದರು. ಆರ್.ಎಂ. ಕರ್ಜಗಿ, ವಿ.ಆರ್ ಕುಲಕರ್ಣಿ ಮತ್ತಿತರರಿದ್ದರು. ಪುರಾತತ್ವ ವಸ್ತುಸಂಗ್ರಹಾಲಯ ಹಾಗೂ ವಿಜಯಪುರ ಉಪ ವಲಯದ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಚಿತ್ರಕಲೆ, ಪ್ರಬಂಧ ಸ್ಪರ್ಧೆಯಲ್ಲಿ ದರಬಾರ ಪ್ರೌಢ ಶಾಲೆ ಮಕ್ಕಳು ಭಾಗವಹಿಸಿದ್ದರು. ವಿಜೇತರಿಗೆ ಪ್ರಮಾಣ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net