

ಬಸವಕಲ್ಯಾಣ: ಅತಿಯಾದ ಮೊಬೈಲ್ ಬಳಕೆ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿದ್ದು, ಸಂಕೋಚಿತ ಮನಸ್ಥಿತಿಗೆ ಕಾರಣವಾಗುವ ಜತೆಗೆ ಕುಟುಂಬ ಪ್ರೇಮ, ಸಮಾಜ ಪ್ರೇಮ, ರಾಷ್ಟ್ರ ಪ್ರೇಮ, ವ್ಯಕ್ತಿತ್ವ ವಿಕಾಸದಿಂದ ದೂರಾಗುತ್ತಿರುವ ಇಂತಹ ಸಂದಿಗ್ಧ ಸಮಯದಲ್ಲಿ ಮಕ್ಕಳನ್ನು ನೈತಿಕ ಮಾರ್ಗದಲ್ಲಿ ಮುನ್ನೆಡೆಸುವ ಜವಾಬ್ದಾರಿ ತಂದೆ-ತಾಯಿ ಅಷ್ಟೇ ಅಲ್ಲ. ಸಮಾಜದ ಮೇಲೂ ಇದೆ ಎಂದು ಪಾರ್ಥಹಳ್ಳಿಯ ಶ್ರೀ ಸದ್ಗುರು ಶರಣಾನಂದ ಸ್ವಾಮೀಜಿ ನುಡಿದರು.
ನಗರದ ಅರಿವು ಆಚಾರ ಅನುಭವ ಕೇಂದ್ರದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ತರಂಗಿಣಿ ಗ್ರಂಥ ಓದು ಸಮಾರೋಪ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದ ಶ್ರೀಗಳು, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಜತೆಗೆ ಸತ್ಸಂಗದಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು. ಅಂದಾಗ ಮಕ್ಕಳು ನೈತಿಕ ಮಾರ್ಗದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಮಾಣಿಕನಾಳನ ಬಾಲಕಿ ಮಾಧುರಿ ಹಣಮಂತ ಬಗಲಿ ಸಾಮಾಜಿಕ ಜಾಲತಾಣದಲ್ಲಿ ಏಳು ತಿಂಗಳಗಳ ಕಾಲ ನಿರಂತರವಾಗಿ ಜಗದ್ಗುರು ಮಾತೆ ಮಹಾದೇವಿ ಅವರು ಬರೆದ ತರಂಗಣಿ ಗ್ರಂಥವನ್ನು ಓದಿ ಹೇಳಿರುವುದು ಶ್ಲಾಘನೀಯ. ಬಾಲ್ಯದಿಂದಲೇ ಆಧ್ಯಾತ್ಮಿಕ ಮಾರ್ಗದಲ್ಲಿ ಮುನ್ನಡೆಯಬೇಕೆಂಬ ಹಂಬಲ ಹೊಂದಿದ್ದಾಳೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾನ್ನಿಧ್ಯ ವಹಿಸಿದ್ದ ಗುಣತೀರ್ಥವಾಡಿ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಮಾತನಾಡಿ, ಸ್ವತಂತ್ರ, ಸ್ವಾಭಿಮಾನ ಹಾಗೂ ಆಧ್ಯಾತ್ಮಿಕ ಜೀವನ ಮಾಡಿ ಸತ್ಪಥದಲ್ಲಿ ಮುನ್ನಡೆಯಲು ಗುರುವಿನ ಮಾರ್ಗದರ್ಶನ ಅವಶ್ಯಕ. ಬಾಲಕಿ ಮಾಧುರಿ ಗುರು-ಹಿರಿಯರ, ತಂದೆ-ತಾಯಿಯರ ಆಶೀರ್ವಾದದಿಂದ ಅಧ್ಯಯನ ಮಾಡಿ ತನ್ನ ಜ್ಞಾನ ಪ್ರತಿಭೆ ಬೆಳಗುತ್ತಿದ್ದು, ಭವಿಷ್ಯದಲ್ಲಿ ಅದ್ಭುತ ಆಧ್ಯಾತ್ಮಿಕ ವೈಚಾರಿಕ ವೈಜ್ಞಾನಿಕ ಪ್ರವಚನಕಾರರಾಗಿ ಹೊರ ಹೊಮ್ಮಲಿ ಎಂದು ಸದಾಶಯ ವ್ಯಕ್ತಪಡಿಸಿದರು.
ಉದ್ಘಾಟನೆ ನೇರವೇರಿಸಿದ ಧಾರವಾಡನ ಪೂಜ್ಯ ಸುಗಣಾದೇವಿ ಮಾತನಾಡಿ, ಮಾನವನ ಜನ್ಮ ಅತ್ಯಂತ ಪವಿತ್ರವಾಗಿದ್ದು, ಮಕ್ಕಳಿಗಾಗಿ ಆಸ್ತಿ ಮಾಡದೇ ಅವರಲ್ಲಿ ಒಳ್ಳೆಯ ಸಂಸ್ಕಾರ ಮತ್ತು ಆದರ್ಶ ಮೌಲ್ಯಗಳನ್ನು ಬೆಳೆಸಿ ಮಕ್ಕಳನ್ನು ಸಮಾಜದ ಆಸ್ತಿಯನ್ನಾಗಿ ಮಾಡುವಲ್ಲಿ ತಂದೆ-ತಾಯಿ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಗೋಕಾಕನ ಯೋಗಮಯಿ ಸತ್ಯಮೇಧಾವಿ ಮಾತನಾಡಿ, ೧೨ನೇ ಶತಮಾನದ ಈ ಕಲ್ಯಾಣ ಪವಿತ್ರ ನೆಲದಲ್ಲಿ ಗುರು ಬಸವಾದಿ ಪ್ರಮಥರು ನಡೆದಾಡಿ ಶಿವನ ಬೆಳಕನ್ನು ಚೆಲ್ಲಿದ್ದಾರೆ. ಅಂತಹ ಬೆಳಕನ್ನು ಅನುಭವಕ್ಕೆ ತಂದುಕೊಳ್ಳುವ ಯೋಗ ನಮಗೆ ಒದಗಬೇಕಾದರೆ ಸತ್ಸಂಗ ಮತ್ತು ಗುರುವಿನ ಅನುಗ್ರಹ ಬೇಕಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅರಿವು ಆಚಾರ ಅನುಭವ ಕೇಂದ್ರದ ಅಧ್ಯಕ್ಷ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್‌ಎಸ್ ನಾಗರಾಳೆ ಮಾತನಾಡಿದರು. ವೈದ್ಯ ಪಂಡಿತ ಬಸವರಾಜ ಗುರೂಜಿ, ಮಾತೋಶ್ರೀ ಕಸ್ತೂರಿಮಾತೆ, ತಾಪಂ ಮಾಜಿ ಉಪಾದ್ಯಕ್ಷ ದಿಲೀಪ ಶಿಂಧೆ, ಲಕ್ಷ್ಮಣರಾವ ಮೇತ್ರಿ, ಗಣಪತಿ ಖಾಸ್ತೆ, ನಾಗಶೆಟ್ಟಿ ಗೋರ್ಟಾ, ನ್ಯಾಯವಾದಿ ಪಂಡಿತ ನಾಗರಾಳೆ, ಹನುಮಂತ ಬಗಲಿ, ರಾಜೇಶ್ವರಿ ಖೂಬಾ, ಜಯಶ್ರೀ ಪಾಟೀಲ್, ಗಿರಿಜಾ ಸಿದ್ದಣ್ಣ, ಸೋನಾಲಿ ನೀಲಕಂಠ, ರೇಣುಕ ಮಾಮ, ಸರಸ್ವತಿ ಹೋದಲೂರೆ ಇತರರಿದ್ದರು.
ಸುಮಿತ್ರ ದಾವಣಗೆರೆ ಸ್ವಾಗತಿಸಿದರು, ಚಂದ್ರಕಾಂತ ಗುಂಗೆ ವಂದಿಸಿದರು. ಸಂಗಮೇಶ್ ತೊಗರಖೇಡೆ ನಿರೂಪಣೆ ಮಾಡಿದರು. ತರಂಗಿಣಿ ಗ್ರಂಥ ವಾಚನ ಮಾಡಿದ ಮಾಣಿಕನಾಳನ ಕುಮಾರಿ ಮಾಧುರಿ ಬಗಲಿ ಅವರನ್ನು ಕಾರ್ಯಕ್ರಮದಲ್ಲಿ ಸತ್ಕರಿಸಿ ಗೌರಿಸಲಾಯಿತು.
ನಮ್ಮ ಶ್ರೀಮಂತಿಕೆಯಲ್ಲಿ ಮಕ್ಕಳು ಕಳೆದು ಹೋಗಬಾರದು. ಮಕ್ಕಳ ಹೃದಯವನ್ನೇ ಶ್ರೀಮಂತಗೊಳಿಸುವಲ್ಲಿ ನಾವೆಲ್ಲ ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಉತ್ತಮ ಮಕ್ಕಳನ್ನು ಈ ಸಮಾಜಕ್ಕೆ ನೀಡುವಲ್ಲಿ ಸಫಲರಾಗುತ್ತೇವೆ. ಇದಕ್ಕಾಗಿ ಮನೆಯಲ್ಲಿ ಮಕ್ಕಳಿಗಾಗಿ ಇತಿಷ್ಟು ಸಮಯ ಮೀಸಲಿಟ್ಟು, ಅವರಲ್ಲಿ ಉತ್ತಮ ಸಂಸ್ಕಾರ ಬೆಳೆಸುವಲ್ಲಿ ಕಾಳಜಿ ವಹಿಸುವದು ಅವಶ್ಯಕ.
| ಎಸ್.ಎಸ್.ನಾಗರಾಳೆ ನಿವೃತ್ತ ಜಿಲ್ಲಾ ನ್ಯಾಯಾಧೀಶ