ಸೈಬರ್ ಅಪರಾಧಗಳ ಅರಿವು

3
Published on

ಮೈಸೂರು: ನೆಟ್ ಬ್ಯಾಕಿಂಗ್ ವಂಚನೆಗಳಿಂದ ಎಚ್ಚರಿಕೆ ವಹಿಸುವುದು ಹೇಗೆ, ಆನ್ಲೈನ್ ವೇದಿಕೆಯಲ್ಲಿ ಹಣ ಹೂಡಿಕೆಗೂ ಮುನ್ನ ಕೈಗೊಳ್ಳಬೇಕಾದ ಎಚ್ಚರಿಕೆಗಳೇನು, ಅಪರಿಚಿತರ ವಿಡಿಯೋ ಕಾಲ್ ಸ್ವೀಕರಿಸುವ ಮುನ್ನ ಅನುಸರಿಸಬೇಕಾದ ಕ್ರಮಗಳೇನು…


ಹೀಗೆ ನಾನಾ ಸೈಬರ್ ಅಪರಾಧ ಸಂಬಂಧಿಸಿದ ಹಾಗೂ ಪೊಲೀಸ್ ಇಲಾಖೆಯ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ ಸಾರ್ವಜನಿಕರಿಗೆ ಒಂದೇ ಸೂರಿನಡಿ ಲಭ್ಯವಾಗುತ್ತಿದೆ. ನಗರದ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಹಾಗೂ ಸಿಐಡಿ, ನಗರ ಪೊಲೀಸ್ ಆಯುಕ್ತರ ಕಚೇರಿ ಸಹಯೋಗದಲ್ಲಿ ತೆರೆದಿರುವ ಮಳಿಗೆಯಲ್ಲಿ ಸೈಬರ್ ಅಪರಾಧಗಳ ಕುರಿತು ಸಮಗ್ರ ಮಾಹಿತಿ, ವಂಚನೆಯಿಂದ ಪಾರಾಗುವ ಬಗೆಯ ಬಗ್ಗೆ ಮಾಹಿತಿ ಒದಗಿಸಲಾಗುತ್ತಿದೆ.


ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪೊಲೀಸರು ಮಳಿಗೆ ತೆರೆದಿದ್ದು, ಸೈಬರ್ ಅಪರಾಧ ತಡೆ ಸುರಕ್ಷಾ ಸಲಹೆಗಳನ್ನು ನೀಡಲಾಗಿದೆ. ಬ್ಯಾಂಕಿಂಗ್ ಮಾಹಿತಿಗಳಾದ ಕಾರ್ಡ್ ನಂಬರ್, ಮುಕ್ತಾಯದ ಅವಧಿ, ಸಿವಿವಿ, ಒಟಿಪಿ, ಪಿನ್, ಯುಪಿಐ ಎಂಪಿಎನ್ ಮಾಹಿತಿಗಳನ್ನು ಯಾರೊಬ್ಬರಿಗೂ ನೀಡಬಾರದು. ಹಾಗೆಯೆ, ಅಪರಿಚಿತ ಮೂಲದ ಸಂದೇಶ, ಇ-ಮೇಲ್‌ಗಳಲ್ಲಿನ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು. ಸರ್ಚ್ ಇಂಜಿನ್‌ನಲ್ಲಿ ಕಂಡುಬರುವ ಸಂಪರ್ಕ ಸಂಖ್ಯೆ, ಇಮೇಲ್ ವಿಳಾಸ ಇತ್ಯಾದಿಗಳನ್ನು ಬಳಸುವ ಮೊದಲು ನೈಜತೆ ತಿಳಿಯಬೇಕು ಎಂಬ ಮಾಹಿತಿಯನ್ನು ಸಾರಲಾಗುತ್ತಿದೆ.


ಆನ್‌ಲೈನ್ ಮೂಲಕ ಸಾಲ ನೀಡುವ ಅನಧಿಕೃತ ಆ್ಯಪ್‌ಗಳನ್ನು ಬಳಸಬಾರದು. ಉದ್ಯೋಗ ಕೊಡಿಸುವ ಹಣದ ಬೇಡಿಕೆ ಇಟ್ಟಲ್ಲಿ ಯಾವುದೇ ಕಾರಣಕ್ಕೂ ಹಣ ನೀಡಬಾರದು. ಮಕ್ಕಳ ಅಶ್ಲೀಲ ಚಿತ್ರ, ದೃಶ್ಯಾವಳಿ ಇತ್ಯಾದಿಗಳನ್ನು ಆನ್‌ಲೈನ್‌ನಲ್ಲಿ ಹುಡುಕುವುದು ಅಪರಾಧ ಎಂಬ ಮಾಹಿತಿಯನ್ನು ಒದಗಿಸಲಾಗಿದೆ.


ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಸೋಮವಾರ ಸೈಬರ್ ಅಪರಾಧ ಸಂಬಂಧ ಮಾಹಿತಿಯ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿ, ಆನ್‌ಲೈನ್ ವಂಚನೆ ಮತ್ತು ದೈನಂದಿನ ವ್ಯವಹಾರದಲ್ಲಿ ನಡೆಯುವ ಅಪರಾಧಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ವಸ್ತುಪ್ರದರ್ಶನಲ್ಲಿ ಮಳಿಗೆ ಆರಂಭಿಸಲಾಗಿದೆ. ಜನರು ಜಾಗ್ರತೆ ವಹಿಸಿದರೆ ಅಪರಾಧಗಳು ಕಡಿಮೆಯಾಗುತ್ತವೆ. ಸಾರ್ವಜನಿಕರು ಮಳಿಗೆಗೆ ಬಂದು ಮಾಹಿತಿ ಪಡೆದುಕೊಳ್ಳಿ ಎಂದರು. ಸಿಐಡಿ ಸೈಬರ್ ಕ್ರೈಂ ಎಸ್‌ಪಿ ಅನುಚೇತ್, ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net