

ಚಿತ್ರದುರ್ಗ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂ.ಬೆಲೆ ಬಾಳುತ್ತದೆಂದು ಹೇಳಲಾಗಿರುವ ಚಿಪ್ಪಂದಿ ಚಿಪ್ಪಿನ ಕಳ್ಳಸಾಗಾಟ ಜಾಲವನ್ನು ಭೇದಿಸಿ ಐವರು ಆರೋಪಿಗಳನ್ನು ಅರಣ್ಯಾಧಿಕಾರಿ,ಸಿಬ್ಬಂದಿ ಬಂಧಿಸಿದ್ದಾರೆ.
ಹೊಳಲ್ಕೆರೆ-ಹೊಸದುರ್ಗ ಹಾಗೂ ಹಿರಿಯೂರು ತಾಲೂಕುಗಳಲ್ಲಿ ಬುಧವಾರ ಭರ್ಜರಿ ಕಾರ‌್ಯಾಚರಣೆ ನಡೆಸಿ ಈ ಮೂರು ತಾಲೂಕುಗಳ ಮೂಲದ ಆರೋಪಿತರನ್ನು ಬಂಧಿಸಿ,ಅವರಿಂದ 3-4 ಲಕ್ಷ ರೂ.ಮೌಲ್ಯದ ಮೂರುವರೆ ಕೆಜಿ ಚಿಪ್ಪು ಹಂದಿ ಚಿಪ್ಪನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಅಳಿವಿನಂಚಿನಲ್ಲಿರುವ ಚಿಪ್ಪು ಹಂದಿಯ ಚಿಪ್ಪು,ಚೈನಾಕ್ಕೆ ರಫ್ತು ಆಗುತ್ತಿದ್ದು,ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅತ್ಯಧಿಕ ಬೇಡಿಕೆ ಇದೆ ಎನ್ನಲಾಗಿದೆ. ಕಳೆದ ಮೂರ‌್ನಾಲ್ಕು ದಿನಗಳಿಂದ ಕನಿಷ್ಠ ಐದು ಚಿಪ್ಪು ಹಂದಿಗಳನ್ನು ಕಳ್ಳ ಸಾಗಾಟಗಾರರು ಕೊಂದಿದ್ದಾರೆ. ಆರೋಪಿತರನ್ನು ಗುರುವಾರ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗುವುದು ಹಾಗೂ ಕಳ್ಳಸಾಗಣೆ ಜಾಲದಲ್ಲಿ ಇನ್ನಷ್ಟು ಆರೋಪಿಗಳನ್ನು ಬಂಧಿಸಲು ಜಾಲ ಬೀಸಲಾಯಿತು.
ಮಾಹಿತಿ ಆಧರಿಸಿ ಚಿಪ್ಪನ್ನು ಖರೀದಿಸುವ ನೆಪದಲ್ಲಿ ಮಾರುವೇಷದೊಂದಿಗೆ ಹೊಳಲ್ಕೆರೆ ಕೊಳ್ಳಾಳು ಬಳಿ ಮೊದಲು ಅಂದಾಜು ಎರಡೂವರೆ ಕೆಜಿ ಚಿಪ್ಪು ವಶಪಡಿಸಿಕೊಂಡು ನಂತರದಲ್ಲಿ ಹಿರಿಯೂರು ಹಾಗೂ ಹೊಸದುರ್ಗ ತಾಲೂಕು ಗೂಳಿಹಟ್ಟಿ ಸಮೀಪ ಪ್ರತ್ಯೇಕ ಕಾರ‌್ಯಾಚರಣೆ ನಡೆಸಲಾಯಿತು.