

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಸಿದ್ದರಾಮಯ್ಯ ಸರ್ಕಾರ ಮುಸಲ್ಮಾನರಿಗೆ ಮಾತ್ರ ಇರುವುದೆಂದು ಮತ್ತೊಮ್ಮೆ ಸಾಬೀತಾಗಿದೆ. ವಕ್ಫ್ ಬೋರ್ಡ್‌ಗಾಗಿ 1974ರಲ್ಲಿ ಮಾಡಿದ ಗೆಜೆಟ್ ನೋಟಿಫಿಕೇಶನ್ ಅನ್ನು ಸರ್ಕಾರ ಹಿಂಪಡೆಯಬೇಕು ಎಂದು ಶಾಸಕ ಹರೀಶ ಪೂಂಜ ಹೇಳಿದರು. ಬೆಳ್ತಂಗಡಿ ಆಡಳಿತ ಸೌಧದ ಎದುರು ಪ್ರತಿಭಟನೆಯಲ್ಲಿ ಮಾತನಾಡಿದರು.
ರಾಜ್ಯದ ಇತಿಹಾಸದಲ್ಲಿ ಭಂಡ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ ಮಾತ್ರ. ಇದು ಮುಸಲ್ಮಾನರ ಪರ ಇರುವ ಸರ್ಕಾರ. ಕಾನೂನು ಸುವ್ಯವಸ್ಥೆ ಹದೆಗಟ್ಟಿದೆ. ವಾಲ್ಮೀಕಿ, ಮುಡಾದಂತಹ ಹಗರಣಗಳು ಸಾಲುಸಾಲಾಗಿ ನಡೆದಿವೆ. ಈಗ ಹಿಂದು ಸಮಾಜಕ್ಕೆ ದ್ರೋಹ, ಅಪಮಾನ ಮಾಡುವ ಕೆಲಸ ಸರ್ಕಾರ ಮಾಡುತ್ತಿದೆ. ಗ್ಯಾರಂಟಿಗಳ ಆಧಾರದಲ್ಲಿ ಅಧಿಕಾರ ಹಿಡಿದ ಕಾಂಗ್ರೆಸ್ ರಾಜ್ಯದ ಅಭಿವೃದ್ಧಿಗೆ ಗಮನಕೊಡದೆ ಅರಾಜಕತೆ ಸೃಷ್ಟಿಸುತ್ತಿದೆ. ಕಾಂಗ್ರೆಸ್ ಭ್ರಷ್ಟಾಚಾರದಿಂದಾಗಿ ರಸ್ತೆ, ಅಂಗನವಾಡಿ, ಶಾಲೆ ರಿಪೇರಿಗೆ ಅನುದಾನ ಇಲ್ಲ. ಆದರೆ ಮುಸಲ್ಮಾನರಿಗೆ ಹತ್ತು ಸಾವಿರ ಕೋಟಿ ರೂ. ಹಣ ನೀಡಲು ಹೊರಟಿದ್ದಾರೆ ಎಂದರು.
ಅಲ್ಪಸಂಖ್ಯಾತರ ಓಲೈಕೆಗೆ ಯಾವುದೇ ನೋಟಿಸು ಕೊಡದೆ, ಕಾನೂನಿನ ಪ್ರಕ್ರಿಯೆ ಮಾಡದೆ ಸಾವಿರಾರು ಎಕರೆ ಜಮೀನನ್ನು ವಕ್ಫ್ ಹೆಸರಿಗೆ ಮಾಡಿದೆ. ಜನ ನಿತ್ಯ ಭಯದಲ್ಲಿ ಜೀವನ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗೆಜೆಟ್ ನೋಟಿಫಿಕೇಶನ್‌ಗಳ ವಿವರ ಇತ್ತೀಚೆಗೆ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ದ.ಕ.ದಲ್ಲೂ ಸುಮಾರು 600 ಎಕರೆ ವಕ್ಫ್ ಆಸ್ತಿ ಇದೆ. ಬೆಳ್ತಂಗಡಿ ತಾಲೂಕಿನಲ್ಲೂ ಕೆಲವು ಎಕರೆ ಇದೆ. ಹೀಗಾಗಿ ಎಲ್ಲ ಹಿಂದುಗಳು ಇದರ ಬಗ್ಗೆ ಜಾಗ್ರತೆ ವಹಿಸಬೇಕಾಗಿದೆ. ಗ್ಯಾರಂಟಿಯ ಮೋಹದಲ್ಲಿ ನಾವಿರುವಾಗ ನಮ್ಮ ಆಸ್ತಿ ಬಗ್ಗೆ ಎಚ್ಚರ ಬೇಕು ಎಂದರು.
ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಮಂಡಲಾಧ್ಯಕ್ಷ ಶ್ರೀನಿವಾಸ, ಪ್ರಧಾನ ಕಾರ್ಯದರ್ಶಿ ಪ್ರಶಾಂತ ಪಾರೆಂಕಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಾನಂದ ಗೌಡ ಉಪಸ್ಥಿತರಿದ್ದರು.