

ಗಜೇಂದ್ರಗಡ: ಪಟ್ಟಣದ 23ನೇ ವಾರ್ಡ್ನ ಉಣಚಗೇರಿ ಭಾಗದ ರೈತರು ವಿದ್ಯುತ್ ಸಮಸ್ಯೆ ಪರಿಹಾರಕ್ಕಾಗಿ 21 ದಿನ ಅಹೋರಾತ್ರಿ ಹೋರಾಟ ನಡೆಸಿದಾಗ ಸೌಜನ್ಯಕ್ಕೂ ಬಂದು ಸಮಸ್ಯೆ ಅಲಿಸದ ಅಂದಿನ ಶಾಸಕರು, ಇತ್ತೀಚೆಗೆ ರೈತರ ಪರ ಹೋರಾಟ ನಡೆಸಿದ್ದು ವಿಪರ್ಯಾಸ ಎಂದು ಗಜೇಂದ್ರಗಡ- ಉಣಚಗೇರಿ ಪಂಪ್ಸೆಟ್ ಬಳಕೆದಾರರ ಸಂಘದ ಅಧ್ಯಕ್ಷ ಮುತ್ತಣ್ಣ ಮ್ಯಾಗೇರಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ರೈತ ಭವನದಲ್ಲಿ ಮಂಗಳವಾರ ಗಜೇಂದ್ರಗಡ- ಉಣಚಗೇರಿ ಪಂಪ್ಸೆಟ್ಗಳ ಹೋರಾಟ ಸಮಿತಿ ಹಾಗೂ ರೈತರಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಿರಂತರ ವಿದ್ಯುತ್ಗಾಗಿ ರೈತರು ಹೆಸ್ಕಾಂ ಕಚೇರಿ ಎದುರು 21 ದಿನ ಹೋರಾಟ ನಡೆಸಿದರೂ ಅಂದಿನ ಶಾಸಕ ಕಳಕಪ್ಪ ಬಂಡಿ ಅವರು ಸೌಜನ್ಯಕ್ಕೂ ನಮ್ಮ ಸಮಸ್ಯೆ ಆಲಿಸಲು ಬರಲಿಲ್ಲ. ಆದರೆ, ಈಗ ರೈತರ ಪರ ಕಾಳಜಿ ತೋರುತ್ತಿದ್ದಾರೆ ಎಂದು ವ್ಯಂಗವಾಡಿದರು.
ರೈತರಾದ ಶಿವಪ್ಪ ಕುಂಬಾರ ಹಾಗೂ ಇಸ್ಮಾಯಿಲ್ ಗೋಲಗೇರಿ ಮಾತನಾಡಿ, ನಿರಂತರ ವಿದ್ಯುತ್ ಪೂರೈಕೆಗಾಗಿ ಹೆಸ್ಕಾಂ ಕಚೇರಿ ಎದುರು ನಡೆಸಿದ ಹೋರಾಟ ವೇಳೆ ಊಟ ಹಾಗೂ ಉಪಾಹಾರಕ್ಕೆಂದು ರೈತರು 100-200 ಹಾಕಿ ಹೋರಾಟ ಮಾಡಿದ್ದೇವೆ. ನಾವು ಯಾರಿಗೂ ಹಣ ನೀಡಿಲ್ಲ ಹಾಗೂ ನಮ್ಮಿಂದ ಯಾರೂ ಹಣ ಸಂಗ್ರಹಿಸಿಲ್ಲ ಎಂದರು.
ಪುರಸಭೆ ವಿಪಕ್ಷ ನಾಯಕ ಮುರ್ತಜಾ ಡಾಲಾಯತ ಮಾತನಾಡಿ, ನಿರಂತರ ವಿದ್ಯುತ್ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಶಾಸಕ ಜಿ.ಎಸ್. ಪಾಟೀಲ ಅವರು ಈಗಾಗಲೇ ಇಂಧನ ಸಚಿವರ ರ್ಚಚಿಸಿದ್ದು, ಸಮಸ್ಯೆ ಪರಿಹಾರಕ್ಕೆ ಒತ್ತಡ ಹಾಕಿದ್ದರೆ. ಶೀಘ್ರದಲ್ಲಿಯೇ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.
ಸಿದ್ದು ಗೊಂಗಡಶೆಟ್ಟಿಮಠ, ಬಸವರಾಜ ಪಲ್ಲೇದ, ರಾಜಪ್ಪ ದಾರೋಜಿ, ಹನಮಂತ ಪವಾರ, ಅನೀಫ್ ಕಟ್ಟಿಮನಿ, ಅಂಬ್ರೇಶ ಮಾರನಬಸರಿ, ಗೌರೀಶ ಪಲ್ಲೇದ ಇದ್ದರು.