

ಮಂಡ್ಯ ಆರ್ಥಿಕ ಸಬಲೀಕರಣದಿಂದ ಸಾಮಾಜಿಕ ಅಭಿವೃದ್ಧಿ ಕಾಣಲಿದೆ ಎಂಬ ಆಶಯದೊಂದಿಗೆ ಧರ್ಮಸ್ಥಳ ಸಂಸ್ಥೆ ಹಲವಾರು ಯೋಜನೆಗಳನ್ನು ಸಮುದಾಯಕ್ಕೆ ನೀಡುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ತಿಳಿಸಿದರು.
ಕಿಕ್ಕೇರಿ ಹೋಬಳಿಯ ಗೋವಿಂದನಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಸಾಧನ ಸಮಾವೇಶ, ಸಹಸ್ರ ಬಿಲ್ವಾರ್ಚನೆ, ಬೀದಿ ಬದಿ ವ್ಯಾಪಾರಿಗಳ ಸಂಘ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸದೃಢ ಸಮಾಜ ನಿರ್ಮಾಣ, ಶಿಕ್ಷಣ, ಆರೋಗ್ಯ, ಧಾರ್ಮಿಕ ಜಾಗೃತಿ, ಕೃಷಿ ಅರಿವು, ಆರ್ಥಿಕ ಸಬಲೀಕರಣ, ಮಾಸಾಶನ, ವಿದ್ಯಾರ್ಥಿವೇತನ, ಮದ್ಯವರ್ಜನೆ ಶಿಬಿರ, ಗುಡಿಕೈಗಾರಿಕೆ ತರಬೇತಿ, ಹೊಲಿಗೆ ತರಬೇತಿ, ಕೆರೆ ಸಂರಕ್ಷಣೆ, ದೇಗುಲ ಜೀರ್ಣೋದ್ಧಾರಕ್ಕೆ ನೆರವು ಸೇರಿದಂತೆ ಹಲವಾರು ಯೋಜನೆಗಳು ಗ್ರಾಮೀಣ ಪ್ರದೇಶದ ಜನರ ಬದುಕು ಹಸನಾಗಲು ಸಹಕಾರಿಯಾಗಿದೆ ಎಂದರು.
ಅರ್‌ಟಿಒ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ಕೆರೆಕಟ್ಟೆ ಉಳಿಸುವ ಕಾರ್ಯಕ್ರಮ, ಗುಡ್ಡಗಾಡು, ಬಯಲು ಪ್ರದೇಶದಲ್ಲಿ ಸೀಡ್‌ಬಾಲ್, ಗಿಡ ನೆಡುವ ಯೋಜನೆಯೊಂದಿಗೆ ಪರಿಸರ ಸಂರಕ್ಷಣೆಗೆ ಮುಂದಾಗಿರುವ ಸಂಸ್ಥೆಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಹೇಳಿದರು.
ಉತ್ತಮ ಸಾಧನೆ ಮಾಡಿದ ಸಂಘದ ಸಾಧಕರಿಗೆ, ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನೆನಪಿನ ಕಾಣಿಕೆ ನೀಡಲಾಯಿತು.
ಸಹಸ್ರ ಬಿಲ್ವಾರ್ಚನೆಯೊಂದಿಗೆ ಪೂಜಾ ಕೈಂಕರ್ಯ ನೆರವೇರಿಸಿ ಧಾರ್ಮಿಕ ಜಾಗೃತಿ ಮೂಡಿಸಲಾಯಿತು. ಯೋಜನೆ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ, ತಾಲೂಕು ಯೋಜನಾಧಿಕಾರಿ ಎಂ. ವೀರೇಶಪ್ಪ, ನರೇಂದ್ರಬಾಬು, ಮೊಟ್ಟೆಮಂಜು, ಗೀತಾ, ಮೀನಾಕ್ಷಿ, ರುದ್ರೇಶ್, ಮೇಲ್ವಿಚಾರಕರಾದ ರೇಣುಕಾ, ಪ್ರವೀಣ, ಸೇವಾ ಪ್ರತಿನಿಧಿಗಳಾದ ಗೀತಾ, ರತ್ನಮ್ಮ, ಕವಿತಾ ಇದ್ದರು.