

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಬಹಳ ಮುಖ್ಯ. ಮೊಬೈಲ್, ಇಂಟರನೆಟ್ ಹಾಗೂ ಇತರ ವ್ಯಸನಗಳಿಗೆ ಒಳಗಾಗದೇ ಕಲಿಕೆಯಲ್ಲಿ ತಮ್ಮ ಚಿತ್ತವಿರಬೇಕು ಎಂದು ಜನತಾ ಶಿಣ ಸಮಿತಿ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ನಗರದ ಜನತಾ ಶಿಕ್ಷಣ ಸಮಿತಿಯ ಆರ್.ಎಸ್. ಹುಕ್ಕೇರಿಕರ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ 2024-25ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾಥಿರ್ಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.
ಪಿಯುಸಿ ಕಲಿಕೆ ಹಂತವು ವಿದ್ಯಾರ್ಥಿ ಬದುಕಿನ ಪ್ರಮುಖ ಕಾಲಟ್ಟ. ಈ ಹಂತದಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳುವುದು ತುಂಬ ಅಗತ್ಯ. ಈ ದಿಸೆಯಲ್ಲಿ ಕಷ್ಟಪಟ್ಟು ಓದದೇ ಇಷ್ಟಪಟ್ಟು ಓದಿದರೆ ಬದುಕು ಬಂಗಾರವಾಗಿ ಸುಂದರ ಮೂರ್ತಿಗಳಂತೆ ಕಂಗೊಳಿಸುತ್ತಾರೆ ಎಂದರು.
ಕಾಲೇಜಿನ ಪ್ರಾಚಾರ್ಯೆ ಭಾರತಿ ಶಾನಭಾಗ ಅವರು ವಿದ್ಯಾರ್ಥಿಗಳಿಗೆ ಕಾಲೇಜಿನ ನಿಯಮಾವಳಿ ಹಾಗೂ ವಿದ್ಯಾರ್ಥಿಗಳ ವರ್ತನೆ, ಸಲಹೆ, ಸೂಚನೆಗಳನ್ನು ನೀಡಿದರು. 2024ರ ಎಸ್ಸೆಸ್ಸೆಲ್ಸಿ, ಸಿಬಿಎಸ್ಸಿ ಹಾಗೂ ಐಸಿಎಸ್ಸಿಯಲ್ಲಿ ಹೆಚ್ಚು ಅಂಕ ಪಡೆದು ಕಾಲೇಜಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಉಪಪ್ರಾಚಾರ್ಯ ಡಾ. ಎಸ್. ಕೆ ಪಾಟೀಲ, ಶಿಕ್ಷಕರು, ಸಿಬ್ಬಂದಿ, ಇತರರು ಇದ್ದರು. ಡಾ. ಗೋವಿಂದರಾಜ ತಳಕೋಡ ಸ್ವಾಗತಿಸಿದರು. ಸುಶೀಲಕುಮಾರ ಕೊಡತೆ ನಿರೂಪಿಸಿದರು. ನಾಗರಾಜ ಪಾಟೀಲ ವಂದಿಸಿದರು.