

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಬಹಳ ಮುಖ್ಯ. ಮೊಬೈಲ್, ಇಂಟರನೆಟ್, ಇತರ ವ್ಯಸನಗಳಿಗೆ ಒಳಗಾಗದೇ ಕಲಿಕೆಯಲ್ಲಿ ಆಸಕ್ತಿ ಹೊಂದಬೇಕು ಎಂದು ಮನೋವೈದ್ಯ ಡಾ. ತೇಜಸ್ವಿ ಟಿ.ಪಿ ಹೇಳಿದರು.
ನಗರದ ಜನತಾ ಶಿಕ್ಷಣ ಸಮಿತಿಯ ಆರ್.ಎಸ್. ಹುಕ್ಕೇರಿಕರ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಮಾತನಾಡಿ, ಪಿಯುಸಿ ಕಲಿಕೆಯ ಹಂತವು ವಿದ್ಯಾರ್ಥಿ ಬದುಕಿನ ಪ್ರಮುಖ ಕಾಲಘಟ್ಟ. ಈ ಹಂತದಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳುವುದು ಅಗತ್ಯ. ಈ ದಿಸೆಯಲ್ಲಿ ಕಷ್ಟಪಟ್ಟು ಓದದೆ ಇಷ್ಟಪಟ್ಟು ಓದಿದರೆ ಬದುಕು ಬಂಗಾರವಾಗಿ ಸುಂದರ ಮೂರ್ತಿಗಳಂತೆ ಕಂಗೊಳಿಸಬಹುದು ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಶಿಕ್ಷಕರಾದ ಡಾ. ವಿಜಯಲಕ್ಷ್ಮೀ ದಂಡಿನ, ಡಾ. ಶಿವಾನಂದ ಟವಳಿ, ಡಾ. ಸಂಗಯ್ಯ ಶಿವಪ್ಪಯ್ಯನಮಠ ಹಾಗೂ ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಡಾ. ಸೂರಜ ಜೈನ್, ಡಾ. ಎಸ್.ಕೆ ಪಾಟೀಲ, ಅಖಿಲಾ ಅಣ್ಣಿಗೇರಿ ಬಾಹುಬಲಿ ಚೌಗಲಾ, ಭಾಗ್ಯಶ್ರೀ ಭಾಗವತ, ಜಿನೇಂದ್ರ ಕುಂದಗೋಳ, ಶ್ರವಣಕುಮಾರ ಯೋಗಿ, ವಿದ್ಯಾರ್ಥಿಗಳು, ಇತರರು ಇದ್ದರು. ಅನುಸೂಯಾ ರೋಣದ ಸ್ವಾಗತಿಸಿದರು. ಕಾಲೇಜಿನ ಪ್ರಾಚಾರ್ಯೆ ಭಾರತಿ ಶಾನಭಾಗ ವಾರ್ಷಿಕ ವರದಿ ವಾಚಿಸಿದರು. ಭಾರ್ಗವಿ ದೇಸಾಯಿ ನಿರೂಪಿಸಿದರು. ನಾಗಮ್ಮ ಹತ್ತಿ ವಂದಿಸಿದರು.