ಯುವತಿಯರ ಬಾಳಲ್ಲಿ ಮೋಸದಾಟ

Groom cheating
Published on

- ಅವಿನ್ ಶೆಟ್ಟಿ ಉಡುಪಿ

ಪ್ರಜ್ಞಾವಂತ ಜಿಲ್ಲೆ ಎನಿಸಿಕೊಂಡ ಉಡುಪಿಯಲ್ಲಿ ಮದುವೆ, ಪ್ರೀತಿ ಹೆಸರಲ್ಲಿ ಯುವತಿಯರ ಬಾಳಲ್ಲಿ ಚೆಲ್ಲಾಟವಾಡಿ ಮೋಸ, ವಂಚನೆ ಮಾಡಿರುವ ಪ್ರಕರಣಗಳು ಜನತೆ ತಲೆ ತಗ್ಗಿಸುವಂತೆ ಮಾಡಿವೆ. ಮೂರ್ನಾಲ್ಕು ತಿಂಗಳಲ್ಲಿ ಮೂವರು ಯುವತಿಯರು ಸಾವಿಗೆ ಶರಣಾಗಿದ್ದಾರೆ. ಇನ್ನಿಬ್ಬರು ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾರೆ. ಒಟ್ಟಾರೆ ಪ್ರಕರಣಗಳಲ್ಲಿ ಮೂವರು ಆರೋಪಿಗಳು ಬಂಧಿತರಾಗಿದ್ದಾರೆ. ಪ್ರಕರಣದಲ್ಲಿ ನ್ಯಾಯಾಂಗ ಹೋರಾಟ ನಡೆಯುತ್ತಿದೆ. ಎರಡು ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಜಾಮೀನು ಪಡೆದುಕೊಂಡಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿರುವ ಸಖಿ ಒನ್‌ಸ್ಟಾಪ್ ಕೇಂದ್ರದ ಮೂಲಕ ನೊಂದ ಕುಟುಂಬಗಳಿಗೆ ನ್ಯಾಯ ಕೊಡಿಸಲು ಶ್ರಮಿಸುತ್ತಿದೆ. ಇತ್ತ ನೊಂದ ಕುಟುಂಬಸ್ಥರು ಮನೆ ಮಗಳಿಗೆ ನ್ಯಾಯ ಕೊಡಿಸಲು ಪೊಲೀಸ್ ಠಾಣೆ, ನ್ಯಾಯಾಲಯ, ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ.

ಮೂವರು ಆತ್ಮಹತ್ಯೆಗೆ ಶರಣು: ಕಳೆದ ಮೂರು ತಿಂಗಳಲ್ಲಿ ಪ್ರೀತಿ, ಮದುವೆ ಹೆಸರಲ್ಲಿ ನೂರು ಕನಸು ಕಂಡು ಬಾಳ ಬೇಕಿದ್ದ ಮೂರು ಜೀವಗಳು ವಂಚನೆ ಪ್ರೀತಿಯ ಬಲೆಗೆ ಸಿಲುಕಿ ಜೀವ ಕಳೆದುಕೊಂಡಿವೆ. ಸ್ಯಾಬ್ರಕಟ್ಟೆ ಕಾಜರಹಳ್ಳಿ ನಿವಾಸಿ, ಎಂಬಿಎ ವಿದ್ಯಾರ್ಥಿನಿ ಅನಿಷಾ (26), ಗುಡ್ಡೆಯಂಗಡಿ ನಿವಾಸಿ ಸ್ಫೂರ್ತಿ ನಾಯಕ್(26), ಕುಕ್ಕೆಹಳ್ಳಿ ಪಡುಸಾಲು ಮನೆ ನಿವಾಸಿ ಹೋಟೆಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿನಿ ರಕ್ಷಿತಾ ನಾಯಕ್(19) ಆತ್ಮಹತ್ಯೆ ಶರಣಾಗಿರುವ ದುರ್ದೈವಿಗಳು. ಅನಿಷಾ ಆತ್ಮಹತ್ಯೆ ಪ್ರಕರಣದಲ್ಲಿ ಚೇತನ್ ಶೆಟ್ಟಿ ಮತ್ತು ರಕ್ಷಿತಾ ನಾಯಕ್ ಪ್ರಕರಣದಲ್ಲಿ ಆರೋಪಿ ಪ್ರಶಾಂತ್ ಕುಂದರ್ ಎಂಬಾತನನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ.

ಇನ್ನಿಬ್ಬರಿಂದ ನ್ಯಾಯಕ್ಕಾಗಿ ಹೋರಾಟ: ಪರ್ಕಳದ ಗಣೇಶ್ ಎಂಬಾತ ಹತ್ತು ವರ್ಷದಿಂದ ಪ್ರೀತಿಸುತ್ತಿದ್ದು, ಇನ್ನೊಬ್ಬರೊಂದಿಗೆ ಮದುವೆಯಾಗಲು ಹೊರಟು ನನಗೆ ಮೋಸ ಮಾಡಿದ್ದಾನೆ ಎಂದು ಬಲಾತ್ಕಾರ, ಮೋಸದ ಬಗ್ಗೆ ಮಣಿಪಾಲದ 29 ವರ್ಷದ ಯುವತಿ ದೂರು ನೀಡಿದ್ದು, ಸದ್ಯ ಆರೋಪಿ ಬಂಧನದಲ್ಲಿದ್ದಾನೆ. ಉಡುಪಿಯ ವಕೀಲ ಸುಕುಮಾರ್ ಶೆಟ್ಟಿ ಎಂಬಾತ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ, ಬಲಾತ್ಕಾರ, ಹಲ್ಲೆ ಮಾಡಿರುವ ಬಗ್ಗೆ ಕೋಟ ಕಾವಡಿ 26 ವರ್ಷದ ಯುವತಿ ಆರೋಪಿಸಿ ಕೆಲವು ದಿನಗಳ ಹಿಂದೆ ದೂರು ನೀಡಿದ್ದು, ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ.

ಮದುವೆ, ಪ್ರೀತಿ ಹೆಸರಲ್ಲಿ ಇತ್ತೀಚೆಗೆ ನಡೆದ ಪ್ರಕರಣಗಳು ತೀರ ಆತಂಕ ಮೂಡಿಸಿವೆ. ಹೆತ್ತವರು, ಹೆಣ್ಣುಮಕ್ಕಳು ಭವಿಷ್ಯದ ಬಗ್ಗೆ ಪ್ರಬುದ್ಧ ಚಿಂತನೆ ರೂಢಿಸಿಕೊಳ್ಳಬೇಕು. ಈ ಐದು ಪ್ರಕರಣದಲ್ಲಿ ಸಂತ್ರಸ್ತ ಹೆಣ್ಣುಮಕ್ಕಳಿಗೆ, ಕುಟುಂಬದವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ. ಕೆಲವು ಪ್ರಕರಣದಲ್ಲಿ ಪೊಲೀಸರು ವಿಳಂಬ ಮಾಡುತ್ತಿರುವ ಆರೋಪವಿದೆ.

- ಶ್ಯಾಮಲಾ ಕುಂದರ್, ಸದಸ್ಯೆ, ರಾಷ್ಟ್ರೀಯ ಮಹಿಳಾ ಆಯೋಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net