

ಮಾನ್ವಿ: ಭಾರತ ಸರ್ಕಾರ ಹಾಗೂ ರಾಜ್ಯ ಕಂದಾಯ ಇಲಾಖೆಯಿಂದ ರೈತರ ಭೂದಾಖಲೆಗಳ ಸುರಕ್ಷತೆಗಾಗಿ ಭೂ ಸುರಕ್ಷಾ ಯೋಜನೆಯಡಿ ತಾಲೂಕಿನ ಎಲ್ಲ ರೈತರ ಜಮೀನುಗಳ ದಾಖಲೆಗಳನ್ನು ಗಣಕೀಕರಣಗೊಳಿಸಲಾಗುವುದು ಎಂದು ತಹಸೀಲ್ದಾರ್ ಭೀಮರಾಯ ರಾಮಸಮುದ್ರ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ಬುಧವಾರ ದಾಖಲೆಗಳ ವಿಭಾಗದಲ್ಲಿ ದಾಖಲೆಗಳಿಗಾಗಿ ಅರ್ಜಿಸಲ್ಲಿಸಿದ ಅರ್ಜಿದಾರರಿಗೆ ಗಣಕೀಕೃತ ದಾಖಲೆಗಳನ್ನು ವಿತರಿಸಿ ಮಾತನಾಡಿದರು. ಶೇ. 70 ದಾಖಲೆಗಳನ್ನು ಗಣಕೀಕರಣ ಮಾಡಲಾಗಿದೆ ಉಳಿದ ದಾಖಲೆಗಳನ್ನು ಕೂಡ ಶೀಘ್ರದಲ್ಲಿ ಗಣಕೀಕರಣ ಗೊಳ್ಳಿಸುವ ಮೂಲಕ ರೈತರ ದಾಖಲೆಗಳು ಸುರಕ್ಷಿತವಾಗಿರಿಸಲಾಗುವುದು.
ರೈತರಿಗೆ ಅಗತ್ಯವಿರುವ ದಾಖಲೆಗಳು ಕಡಿಮೆ ಸಮಯದಲ್ಲಿ ನೀಡುವುದಕ್ಕೆ ಸಾಧ್ಯವಾಗಲಿದೆ ಎಂದು ತಿಳಿಸಿದರು. ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್, ಶಿರಸ್ತೇದಾರ್ ವಿರೂಪಣ್ಣ, ಕಂದಾಯ ನಿರೀಕ್ಷಕರಾದ ಸತೀಶಕುಮಾರ, ಅಮಿತ್ ಹರ್ಷಪಾಲ್ ಇನ್ನಿತರರು ಇದ್ದರು.