ಸರ್ಕಾರಿ ಶಾಲೆಯಲ್ಲಿ ಕಂಪ್ಯೂಟರ್ ತರಬೇತಿ

Btw_Computer Training
Published on

ಬಂಟ್ವಾಳ: ಎಲ್.ಕೆ.ಜಿ. ತರಗತಿಯಿಂದ ಏಳನೇ ತರಗತಿವರೆಗೆ ಎಲ್ಲ ಮಕ್ಕಳಿಗೂ ಉಚಿತ ಕಂಪ್ಯೂಟರ್ ಶಿಕ್ಷಣ ನೀಡುವ ಮೂಲಕ ಸರ್ಕಾರಿ ಶಾಲೆಗೆ ತೆರಳುವ ಮಕ್ಕಳಲ್ಲೂ ಆಧುನಿಕ ತಂತ್ರಜ್ಞಾನದ ಅನುಭವ ನೀಡುವ ಕೆಲಸವನ್ನು ಬಿ.ಸಿ.ರೋಡ್‌ನಲ್ಲಿ ಮಾಡಲಾಗುತ್ತಿದೆ. ಇದು ಬಿ.ಸಿ.ರೋಡ್ ಅಜ್ಜಿಬೆಟ್ಟುವಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ದೊರಕುವ ಸೌಲಭ್ಯ.

ಮುಖ್ಯಶಿಕ್ಷಕಿ ಸೇರಿ ನಾಲ್ವರು ಶಿಕ್ಷಕರು, ಇಬ್ಬರು ಅತಿಥಿ ಶಿಕ್ಷಕರು, ಇಬ್ಬರು ಗೌರವ ಶಿಕ್ಷಕಿಯರು, ಓರ್ವ ಕಂಪ್ಯೂಟರ್ ತರಬೇತುದಾರರು ಇರುವ ಈ ಶಾಲೆಯಲ್ಲಿ ಎಲ್.ಕೆ.ಜಿ, ಯು.ಕೆ.ಜಿಯಲ್ಲಿ 20ರಷ್ಟು ಮಕ್ಕಳಿದ್ದರೆ, ಒಂದರಿಂದ ಏಳನೇ ತರಗತಿವರೆಗೆ 102 ಮಕ್ಕಳಿದ್ದಾರೆ. ಒಟ್ಟು 122 ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ಹಲವು ದಾನಿಗಳ ನೆರವಿನಿಂದ ಕಂಪ್ಯೂಟರ್ ಅನ್ನು ಕೊಡುಗೆಯಾಗಿ ಪಡೆದು ಮಕ್ಕಳಿಗೆ ಪ್ರಾಯೋಗಿಕವಾಗಿ ಕಂಪ್ಯೂಟರ್ ಶಿಕ್ಷಣ ಆರಂಭಿಸಲಾಗಿತ್ತು. ಪಾಲಕರೊಬ್ಬರು ತರಬೇತಿ ನೀಡಲು ಮುಂದೆ ಬಂದದ್ದು ಮತ್ತಷ್ಟು ಬಲ ನೀಡಿತು. ಇದೀಗ ಕಳೆದ ವರ್ಷ ಶಾಲೆಯ ಎಲ್ಲ ಮಕ್ಕಳೂ ಕಂಪ್ಯೂಟರ್ ತರಬೇತಿ ಪಡೆದಿದ್ದು, ಉತ್ತಮ ಸಾಧನೆ ತೋರಿದ್ದಾರೆ. ಇವರಿಗೆ ಈ ವಾರ್ಷಿಕ ಪರೀಕ್ಷೆಯ ಸಂದರ್ಭ ಪರೀಕ್ಷೆಯೂ ನಡೆದಿದೆ. ಇದರ ಜತೆಗೆ ಪ್ರಾಜೆಕ್ಟರ್, ಸ್ಕ್ರೀನ್ ಹಾಗೂ ಸ್ಮಾರ್ಟ್ ಟಿವಿಯೂ ಇದ್ದು, ಡಿಜಿಟಲ್ ಮಾಧ್ಯಮ ಮೂಲಕ ಹೆಚ್ಚಿನ ಅನುಭವ ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಿದ್ದಾರೆ.

ದಾನಿಗಳ ನೆರವು, ಹಳೇ ವಿದ್ಯಾರ್ಥಿಗಳ ಸಹಕಾರ:

ರೋಟರಿ ಕ್ಲಬ್ ಬಂಟ್ವಾಳ, ಭೂಮಾಪಕರ ಜಿಲ್ಲಾ ಸಂಘ, ಸೇವ್ ಲೈಫ್ ಚಾರಿಟೆಬಲ್ ಟ್ರಸ್ಟ್, ಜೆಸಿಐ ಬಂಟ್ವಾಳ, ಜೋಡುಮಾರ್ಗ ಜೇಸಿ, ರೋಟರಿ ಟೌನ್, ಬ್ಯಾಂಕ್ ಆಫ್ ಬರೋಡಾದಂಥ ಸಂಸ್ಥೆಗಳ ಸಹಿತ ಹಳೇ ವಿದ್ಯಾರ್ಥಿಗಳು, ಶಾಲಾ ಮಕ್ಕಳ ಪಾಲಕರು, ಹಿತೈಷಿಗಳು, ಶಿಕ್ಷಕರು, ಹಲವು ದಾನಿಗಳು ಶಾಲೆಯ ಹಲವು ಚಟುವಟಿಕೆಗಳಿಗೆ ಕೈಜೋಡಿಸಿದ್ದಾರೆ. ಕಂಪ್ಯೂಟರ್ ಶಿಕ್ಷಣ, ಗೌರವ ಶಿಕ್ಷಕರ ವೇತನ ಸಹಿತ ಹಲವು ರಚನಾತ್ಮಕ ಚಟುವಟಿಕೆಗಳಿಗೆ ನೆರವಾಗಿದ್ದಾರೆ. ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಗಣೇಶ್ ಕಾಮಾಜೆ ಅವರ ನೇತೃತ್ವದಲ್ಲಿ ತಂಡವೇ ರಚನೆಯಾಗಿ ಶಾಲಾಭಿವೃದ್ಧಿಗೆ ಪಣ ತೊಟ್ಟಿದ್ದು, ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದಾರೆ.

ಸ್ಪೋಕನ್ ಇಂಗ್ಲಿಷ್ ತರಬೇತಿ ಕೂಡಾ ಲಭ್ಯ

ಸುಸಜ್ಜಿತವಾದ ತರಗತಿ ಕೊಠಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ, ದಾನಿಗಳ ನೆರವಿನಿಂದ ಶುದ್ಧ ಕುಡಿಯುವ ನೀರಿನ ಘಟಕ, ಸ್ಪೋಕನ್ ಇಂಗ್ಲೀಷ್ ತರಬೇತಿ, ಸರ್ಕಾರ ನೀಡುವ ಉಚಿತ ಪಠ್ಯಪುಸ್ತಕ, ಮೊಟ್ಟೆ, ಹಾಲು, ಬಿಸಿಯೂಟ, ಸಮವಸ್ತ್ರದ ಜತೆಗೆ ಐಡಿ ಕಾರ್ಡ್, ಬೆಲ್ಟ್, ಪುಸ್ತಕ ಹಾಗೂ ಮಕ್ಕಳ ಪಠ್ಯೇತರ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತದೆ. ಶಾಲೆಯಲ್ಲಿ ಸಮರ್ಥ ಹಾಗೂ ಅನುಭವಿ ಶಿಕ್ಷಕರ ತಂಡವಿದ್ದು, ಎಲ್.ಕೆ.ಜಿ. ಹಾಗೂ ಗೌರವ ಶಿಕ್ಷಕರ ವೇತನವನ್ನು ದಾನಿಗಳ ನೆರವಿನಿಂದ ಭರಿಸಲಾಗುತ್ತಿದೆ. ಪ್ರಸ್ತುತ 122 ವಿದ್ಯಾರ್ಥಿಗಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಇಲ್ಲಿ ಕಲಿತ ಹಳೇ ವಿದ್ಯಾರ್ಥಿಗಳ ಪ್ರೋತ್ಸಾಹ, ಸ್ವಯಂಸೇವಾ ಸಂಸ್ಥೆಗಳ ನೆರವು, ವಿದ್ಯಾಭಿಮಾನಿಗಳ ಪ್ರೋತ್ಸಾಹದಿಂದ ಶಿಕ್ಷಕರ ಪೂರಕ ಕೊಡುಗೆಯಿಂದ ಈ ಕಾರ್ಯ ಸಾಧ್ಯವಾಗಿದೆ. ಶಾಲೆಯ ಮಕ್ಕಳು ಪ್ರತಿಭಾನ್ವಿತರಾಗಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕು ಎಂಬುದೇ ನಮ್ಮ ಉದ್ದೇಶ. ಹರೀಶ ಮಾಂಬಾಡಿ, ಅಧ್ಯಕ್ಷರು, ಎಸ್.ಡಿ.ಎಂ.ಸಿ. ವಿದ್ಯಾರ್ಥಿಗಳ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗೆ ಪೂರಕ ವ್ಯವಸ್ಥೆಗಳನ್ನು ಕಲ್ಪಿಸಲಾಗಿದ್ದು, ರಚನಾತ್ಮಕ ಚಟುವಟಿಕೆಗಳಿಗೆ ಶಾಲೆಯಲ್ಲಿ ಪ್ರೋತ್ಸಾಹ ನೀಡಲಾಗುತ್ತಿದೆ. ಲಕ್ಷ್ಮೀ, ಮುಖ್ಯಶಿಕ್ಷಕಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಇಲ್ಲಿದೆ. ಶಿಕ್ಷಣಕ್ಕೆ ಬೇಕಾದ ಸವಲತ್ತು ನೀಡುವಲ್ಲಿ ಹಳೇ ವಿದ್ಯಾರ್ಥಿಗಳ ಸಂಘ ಶ್ರಮಿಸುತ್ತಿದೆ. ವಿಶಾಲವಾದ ಆಟದ ಮೈದಾನ, ಸ್ಕೌಟ್-ಗೈಡ್ಸ್ ಇದ್ದು, ಎಲ್ಲರಿಗೂ ಉಚಿತ ಕಂಪ್ಯೂಟರ್ ಶಿಕ್ಷಣ ವ್ಯವಸ್ಥೆ ಇದೆ. ಗಣೇಶ್ ಕಾಮಾಜೆ, ಅಧ್ಯಕ್ಷರು, ಹಳೇ ವಿದ್ಯಾರ್ಥಿಗಳ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net