

ಮಡಿಕೇರಿ:
ಪ್ರತಿ ವರ್ಷವೂ ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶ ಬಂದಾಗ ಸಾಮಾನ್ಯವಾಗಿ ಕೊಡಗಿನವರಿಗೆ ನಿರಾಸೆ ಕಾದಿರುತ್ತದೆ. ಫಲಿತಾಂಶ ಪಟ್ಟಿಯಲ್ಲಿ ಹುಡುಕಿದರೆ ಜಿಲ್ಲೆಯಿಂದ ಒಬ್ಬರ ಹೆಸರೂ ಇರುವುದಿಲ್ಲ. ಕ್ರೀಡೆ, ಸೈನ್ಯ, ಸಿನಿಮಾ, ವೈಮಾನಿಕ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕೊಡಗಿನವರು ನಾಗರಿಕ ಸೇವಾ ಸೇವಾ ಕ್ಷೇತ್ರದಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಇದ್ದಾರೆ. ಜಿಲ್ಲೆಯಲ್ಲಿ ಬುದ್ಧಿವಂತರ ಸಂಖ್ಯೆಗೇನೂ ಕಡಿಮೆ ಇಲ್ಲ. ಸೂಕ್ತ ಮಾರ್ಗದರ್ಶನ, ತರಬೇತಿ ಸಿಕ್ಕಿದರೆ ಇಲ್ಲಿಯ ಯುವ ಜನಾಂಗವೂ ಯುಪಿಎಸ್‌ಸಿ, ಕೆಪಿಎಸ್‌ಸಿಯಂತಹ ನಾಗರಿಕ ಸೇವಾ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಬಲ್ಲರು ಎನ್ನುವುದು ಸ್ಥಳೀಯರ ಸಾರ್ವತ್ರಿಕ ಅಭಿಪ್ರಾಯ. ಕೊಡಗಿನಲ್ಲಿ ಈಗ ಹೊಸದಾಗಿ ಪ್ರತ್ಯೇಕ ವಿಶ್ವವಿದ್ಯಾಲಯ ಆಗಿದೆ. ಸರ್ಕಾರಿ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜು ಕೂಡ ಇದೆ. ವರ್ಷಂಪ್ರತಿ ಸಾವಿರಾರು ಸಂಖ್ಯೆಯಲ್ಲಿ ಪದವೀಧರರು ಹೊರಬರುತ್ತಿದ್ದಾರೆ. ಇಂಥವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾರ್ಗದರ್ಶನ ಮತ್ತು ಉನ್ನತ ಮಟ್ಟದ ತರಬೇತಿ ಕೊಡುವ ಸಂಸ್ಥೆಯೊಂದರ ತುರ್ತು ಅಗತ್ಯ ಜಿಲ್ಲೆಗೆ ಇದೆ. ಇದರಿಂದ ನಾಗರಿಕ ಸೇವಾ ಕ್ಷೇತ್ರದಲ್ಲೂ ಕೊಡಗಿನವರು ಹೆಸರು ಮಾಡಬಲ್ಲರು ಎನ್ನುವ ಒಟ್ಟು ಅಭಿಪ್ರಾಯ ವಿಜಯವಾಣಿ ಲೌಡ್ ಸ್ಪೀಕರ್‌ನಲ್ಲಿ ವ್ಯಕ್ತವಾಗಿದೆ.
ಕೊಡಗಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲಕರ ವಾತಾವರಣ ಅ?್ಟಾಗಿ ಇಲ್ಲ. ಅವುಗಳ ಬಗ್ಗೆ ಮಾಹಿತಿಯೂ ಕಡಿಮೆಯೇ. ಇದಕ್ಕೆ ತರಬೇತಿಯೊಂದೇ ಅನಿವಾರ್ಯವೇನಲ್ಲ. ಆದರೆ ಪರೀಕ್ಷೆ ಎದುರಿಸುವ ಬಗ್ಗೆ, ಪರೀಕ್ಷೆಯನ್ನು ಹೇಗೆ ಬರೆಯಬೇಕೆಂಬುದರ ಬಗ್ಗೆಯಾದರೂ ಮಾಹಿತಿ ಪಡೆದುಕೊಳ್ಳಲು ಈಗಾಗಲೇ ಪರೀಕ್ಷೆ ಎದುರಿಸಿದವರನ್ನು, ತರಬೇತಿಯ ಕೇಂದ್ರಗಳನ್ನು ಭೇಟಿಯಾಗಿ ಮಾಹಿತಿ ಪಡೆದುಕೊಳ್ಳುವುದು ಅವಶ್ಯ. ಪಿಯುಸಿ ಹಂತದಲ್ಲಿಯೇ ಶೈಕ್ಷಣಿಕ ಸಂಸ್ಥೆಗಳು ರಾಜ್ಯ, ಕೇಂದ್ರ ಸರ್ಕಾರದ ಹುದ್ದೆಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವತ್ತ ಗಮನ ಹರಿಸಬೇಕು.
ಮಿಲನಾ ಭರತ್, ಸಹಾಯಕ ನಿರ್ದೇಶಕಿ, ಮೀನುಗಾರಿಕೆ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ
ಜಿಲ್ಲೆಯ ಯುವ ಸಮುದಾಯದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಹಳ?್ಟು ಬದಲಾವಣೆ ಆಗಬೇಕಾಗಿದೆ. ಯುಪಿಎಸ್‌ಸಿಯಂತಹ ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಳ್ಳಲು ಮತ್ತು ಅದರ ಸಿದ್ಧತೆಗೆ ವಿದ್ಯಾರ್ಥಿಗಳನ್ನು ತಯಾರಿಗೊಳಿಸಬೇಕಿದೆ. ಕ್ರೀಡೆ, ಸೇನೆ, ಸಿನಿಮಾ, ರಾಜಕೀಯ, ಸಾಹಿತ್ಯ ಕ್ಷೇತ್ರದಲ್ಲಿ ಬಹಳ?್ಟು ಹೆಸರು ಪಡೆದಿರುವ ಕೊಡಗಿನಲ್ಲಿ ಭಾರತೀಯ ಆಡಳಿತ ಸೇವೆಯಂತಹ ಉನ್ನತ ಅಧಿಕಾರದ ಹುದ್ದೆಗಳಿಗೆ ಸೇರುವಂತೆ ಉತ್ತೇಜನ ನೀಡುವಂತಹ ಪೂರಕ ವಾತಾವರಣದ ನಿರ್ಮಾಣ ಆಗಬೇಕಿದೆ.
ಜಮೀರ್ ಅಹಮದ್, ಕನ್ನಡ ಉಪನ್ಯಾಸಕ, ಕೊಡಗು ವಿಶ್ವವಿದ್ಯಾಲಯ, ಚಿಕ್ಕಅಳುವಾರ
ಹಳ್ಳಿಗಾಡು, ರೈತಾಪಿ ವರ್ಗದ ವಿದ್ಯಾರ್ಥಿಗಳೇ ಹೆಚ್ಚಿರುವ ಕೊಡಗು ಜಿಲ್ಲೆಯಲ್ಲಿ ಯುಪಿಎಸ್‌ಸಿ ಪರೀಕ್ಷೆಯ ಬಗ್ಗೆ ಮಾಹಿತಿಯ ಕೊರತೆ ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ಇಲ್ಲದಿರುವುದು ವಿದ್ಯಾರ್ಥಿಗಳ ನಿರಾಸಕ್ತಿಗೆ ಕಾರಣವಿರಬಹುದು. ಕೊಡಗಿನ ಮಟ್ಟಿಗೆ ಉತ್ತಮವಾದ ಕೋಚಿಂಗ್ ಸೆಂಟರ್‌ಗಳು ಇಲ್ಲ. ಯುಪಿಎಸ್‌ಸಿ ಪರೀಕ್ಷೆಯನ್ನು ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಪರೀಕ್ಷೆಯ ತಯಾರಿಗಾಗಿ ಹೆಚ್ಚಿನ ಕೋಚಿಂಗ್ ನೀಡುವಂತಹ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಿದಲ್ಲಿ ಯುಪಿಎಸ್ಸಿ ಪರೀಕ್ಷೆಯನ್ನು ಬರೆಯಬೇಕೆಂದುಕೊಂಡಿರುವ ಜಿಲ್ಲೆಯ ಅಭ್ಯರ್ಥಿಗಳಿಗೆ ಸಹಾಯವಾಗಬಹುದು.
ಹೇಮಂತ್ ಪಾರೇರ, ಯುವ ಕೃಷಿಕ, ಯಡವನಾಡು
ಕೊಡಗಿನ ಯುವಜನತೆಗೆ ಬಹಳಷ್ಟು ವರ್ಷಗಳ ಕಾಲ ಸಿವಿಲ್ ಸರ್ವಿಸಸ್ ಹುದ್ದೆಗಳು ಮೊದಲ ಆಯ್ಕೆಯಾಗಿರಲಿಲ್ಲ. ಇಲ್ಲಿನವರನ್ನು ಭಾರತೀಯ ಸೇನೆ ಮತ್ತು ಕ್ರೀಡೆ ಹೆಚ್ಚು ಆಕರ್ಷಿಸುತ್ತಿತ್ತು. ನಂತರ ಹೆಚ್ಚಿನ ಪ್ರತಿಭಾವಂತ ವಿದ್ಯಾರ್ಥಿಗಳು ಮೆಡಿಕಲ್ ಮತ್ತು ಇಂಜಿನಿಯರಿಂಗ್ ಓದಿನ ಕಡೆಗೆ ಮುಖ ಮಾಡಿದರು. ಕಳೆದ ಕೆಲವು ವರ್ಷಗಳಲ್ಲಿ ಕೊಡಗಿನ ಯುವ ಜನತೆಯಲ್ಲಿಯೂ ಸಿವಿಲ್ ಸರ್ವಿಸಸ್ ಪರೀಕ್ಷೆಗಳನ್ನು ಬರೆಯುವ ಆಸಕ್ತಿ ಮೂಡಿರುವುದನ್ನು ನಾನು ಗಮನಿಸಿದ್ದೇನೆ. ಮುಂದಿನ ದಿನಗಳಲ್ಲಿ ನಮ್ಮ ಜಿಲ್ಲೆಯಿಂದಲೂ ಐಎಎಸ್, ಐಪಿಎಸ್ ಅಧಿಕಾರಿಗಳು ಬರಲಿದ್ದಾರೆ
ಮೇಜರ್ ಡಾ. ಕುಶ್ವಂತ್ ಕೋಳಿಬೈಲು, ಮಕ್ಕಳ ತಜ್ಞ, ಕೊಡಗು ವೈದ್ಯಕೀಯ ಮಹಾ ವಿದ್ಯಾಲಯ
ಕೊಡಗಿನ ಈ ಸುಂದರ ಪರಿಸರ ಅಧ್ಯಯನಕ್ಕೆ ಯೋಗ್ಯವಾಗಿದೆ. ಇಲ್ಲಿ ಪ್ರತಿಭಾವಂತರೂ ಇದ್ದಾರೆ. ಆದರೆ ಯುಪಿಎಸ್‌ಸಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರೇರಣೆ, ಮಾರ್ಗದರ್ಶನ, ತರಬೇತಿಯ ಸೌಲಭ್ಯಗಳು ಇಲ್ಲದಿರುವುದರಿಂದ ಕೊಡಗಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಂದ ಹೊರತಾಗಿ ಬೇರೆ ಕ್ಷೇತ್ರಗಳಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡುತ್ತಿದ್ದಾರೆ. ಸಂಪನ್ಮೂಲ ವ್ಯಕ್ತಿಗಳು ಲಭ್ಯವಾದರೆ ಮಂದಿನ ದಿನಗಳಲ್ಲಿ ನಮ್ಮ ಸಂಸ್ಥೆ ವತಿಯಿಂದ ತರಬೇತಿ ಕೊಡಲು ಉತ್ಸುಕರಾಗಿದ್ದೇವೆ.
ಡಾ. ಕವಿತಾ ಪಿ.ಸಿ, ಸ್ಥಾಪಕ ಟ್ರಸ್ಟಿ, ಓಜಸ್ವಿ ಫೌಂಡೇಷನ್, ಗೋಣಿಕೊಪ್ಪ
ಕೊಡಗಿನಂತಹ ಗ್ರಾಮೀಣ ಪ್ರದೇಶದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಪ್ರಾಥಮಿಕ ಹಂತದಲ್ಲಿಯೇ ಮಾಹಿತಿ ಕೊಡುವ ಕೆಲಸವಾಗಬೇಕು. ಶಾಲಾ ಪಠ್ಯದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯ ಅಗತ್ಯ ಇದೆ. ಹಳ್ಳಿಯ ವಿದ್ಯಾರ್ಥಿಗಳಿಗೆ ದೆಹಲಿ, ಬೆಂಗಳೂರಿನಂತಹ ಪಟ್ಟಣಗಳಲ್ಲಿ ಪರೀಕ್ಷಾ ತರಬೇತಿ ಖಂಡಿತಾ ಅಸಾಧ್ಯ, ಹಾಗಾಗಿ ಕೊಡಗಿನಲ್ಲಿ ಕೋಚಿಂಗ್ ಸೆಂಟರ್‌ನ ಅವಶ್ಯಕತೆ ಇದೆ. ಮಕ್ಕಳನ್ನು ಮಾರ್ಕ್ ಮೆಷಿನ್‌ಗಳನ್ನಾಗಿ ತಯಾರಿಸುವ ಒತ್ತಡ ಹೇರದೆ ಪಠ್ಯದ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೇರೇಪಿಸಿ ,ಬದುಕಿನ ಗಟ್ಟಿ ಅವಕಾಶಗಳ ಕುರಿತು ಆತ್ಮವಿಶ್ವಾಸ ಮೂಡಿಸಬೇಕು.
ಲೋಕೇಶ್ ಊರುಬೈಲು, ರಂಗ ನಿರ್ದೇಶಕ, ಮಡಿಕೇರಿ
ನಾಗರಿಕ ಸೇವೆ ಎನ್ನುವ ಮಹತ್ತರವಾದ ಪರೀಕ್ಷೆ ನಡೆಯುತ್ತದೆ ಎನ್ನುವುದು ಇಂದಿನ ಜನಾಂಗದ ಹಲವರಿಗೆ ತಿಳಿದಿಲ್ಲ. ಪಾಲಕರು, ಉಪನ್ಯಾಸಕರು ಮತ್ತು ತಿಳಿದಿರುವವರು ತಿಳಿಯದವರಿಗೆ ಜಾಗೃತಿ ಮೂಡಿಸಬೇಕು. ವಿದ್ಯೆ ಎಂದರೆ ಕೇವಲ ಒಂದು ಡಿಗ್ರಿ ಪಡೆಯುವುದಲ್ಲ. ಅದಕ್ಕಿಂತ ಮಿಗಿಲಾದ ದೊಡ್ಡ ಜಗತ್ತು ಇದೆ ಎನ್ನುವುದನ್ನು ೧೦, ೧೨ನೇ ತರಗತಿಗಳಲ್ಲೇ ಮಾಹಿತಿ ಕೊಡುವ ಕೆಲಸ ಆಗಬೇಕು. ಯಾರಿಗಾದರೂ ಯುಪಿಎಸ್‌ಸಿ ಬಗ್ಗೆ ಆಸಕ್ತಿ ಇದೆ ಎಂದರೆ ಅಂತಹ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಸೂಕ್ತ ಮಾರ್ಗದರ್ಶನ ಕೊಡಿಸುವ ಕೆಲಸ ಮಾಡುತ್ತೇವೆ.
ಎಸ್.ಕೆ. ಸತೀಶ್, ರೊಟರಿ ಅಸಿಸ್ಟೆಂಟ್ ಗವರ್ನರ್, ಕುಶಾಲನಗರ
ಯುಪಿಎಸ್‌ಸಿ ಪರೀಕ್ಷೆ ಬಗ್ಗೆ ಸಾರ್ವತ್ರಿಕವಾಗಿ ಈಗ ಆಸಕ್ತಿ ಬರುತ್ತಿದೆ. ಪದವಿ ಮತ್ತು ಪದವಿಪೂರ್ವ ಶಿಕ್ಷಣ ಹಂತದಲ್ಲಿ ಈ ಬ್ಗಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಇತ್ತೀಚಿನ ದಿನಗಳಲ್ಲಿ ಕೊಡಗಿನಲ್ಲೂ ಕೆಲವರು ಈ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಮೊದಲೆಲ್ಲಾ ತರಬೇತಿಗೆ ದೆಹಲಿಗೆ ಹೋಗಬೇಕಿತ್ತು. ಈಗ ಬೆಂಗಳೂರಿನಲ್ಲೂ ತರಬೇತಿ ಸಿಗುತ್ತಿದೆ. ಆದರೆ ಕೋಚಿಂಗ್ ತೆಗೆದುಕೊಳ್ಳದೆಯೂ ಆಯ್ಕೆ ಆಗಿರುವವರನ್ನು ನಾವು ನೋಡಬಹುದು. ಮಾನಸಿಕ ತಯಾರಿ, ಬದ್ಧತೆ ಬೇಕು. ಒಂದು ಬಾರಿ ಪ್ರಿಲಿಮಿನರಿ ಪರೀಕ್ಷೆಯಲ್ಲಿ ವಿಫಲ ಆದರೆ ಅಲ್ಲಿಗೇ ಪ್ರಯತ್ನ ಬಿಡಬಾರದು. ೫,೬ ಸಲ ಪ್ರಿಲಿಮಿನರಿ ಬರೆದು ನಂತರ ಉತ್ತಮ ರ‌್ಯಾಂಕ್ ಪಡೆದವರೂ ಇದ್ದಾರೆ.
ಕೆ.ವಿ. ಸುರೇಶ್, ಕ್ಷೇತ್ರ ಶಿಕ್ಷಣಾಧಿಕಾರಿ, ಸೋಮವಾರಪೇಟೆ
ಯುಪಿಎಸ್‌ಸಿ ಸೇರಿ ನಾಗರಿಕ ಸೇವಾ ಪರೀಕ್ಷೆಗಳ ಬಗ್ಗೆ ಮೊದಲಿಗೆ ಮಾರ್ಗದರ್ಶನ, ಅರಿವು ಇರಬೇಕು. ಜತೆಗೆ ಕೊಡಗಿನಲ್ಲಿ ಕೋಚಿಂಗ್ ಸೆಂಟರ್ ಅಗತ್ಯವಿದೆ. ಬಿಹಾರದಂತಹ ರಾಜ್ಯಗಳಿಂದ ನಾಗರಿಕ ಸೇವೆಗಳಿಗೆ ಆಯ್ಕೆ ಆಗುವವರಲ್ಲಿ ಶೇ. ೯೦ರಷ್ಟು ಮಂದಿ ಬಡತನದ ಹಿನ್ನೆಲೆಯಿಂದ ಬಂದಿರುತ್ತಾರೆ. ಅಲ್ಲಿಗೆ ಹೋಲಿಸಿದರೆ ಕೊಡಗಿನವರು ಆರ್ಥಿಕವಾಗಿ ಸಬಲರಾಗಿದ್ದಾರೆ. ಸಾಮಾನ್ಯವಾಗಿ ಸಾಕಷ್ಟು ಆಸ್ತಿವಂತರೂ ಆಗಿರುತ್ತಾರೆ. ಭವಿಷ್ಯದ ಪೀಳಿಗೆಯ ಮಕ್ಕಳು ಬುದ್ಧಿವಂತರಿದ್ದಾರೆ. ಈ ಕ್ಷೇತ್ರದಲ್ಲಿ ಖಂಡಿತವಾಗಿ ಆಸಕ್ತಿ ತೋರಿಸುತ್ತಾರೆ.
ಲಾವಣ್ಯ, ಕೊಡಗು ಮೂಲ್ ಸಾಫ್ಟ್‌ವೇರ್ ಎಂಜಿನಿಯರ್, ಬೆಂಗಳೂರು
ಇತರ ಪ್ರಮುಖ ನಗರಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಕೋಚಿಂಗ್ ಕ್ಲಾಸ್ ಇಲ್ಲ. ಶಾಲೆ ಅಥವಾ ಕಾಲೇಜು ಮಟ್ಟದಲ್ಲಿ ಯುಪಿಎಸ್‌ಸಿ ಪರೀಕ್ಷೆಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹಲವಾರು ವಿದ್ಯಾ ಸಂಸ್ಥೆಗಳು ಇಲ್ಲಿವೆ. ಆದರೆ ಸಂಜೆ ಕಾಲೇಜು ಸೌಲಭ್ಯಗಳಿಲ್ಲ. ಕೊಡಗಿಗೆ ಒಂದು ಸಂಜೆ ಕಾಲೇಜು ಅಗತ್ಯವಿದೆ. ಸುದ್ದಿ ಮಾಧ್ಯಮಗಳು, ಟಿವಿ ಚಾನಲ್‌ಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಜಾಗೃತಿ ಮೂಡಿಸಬೇಕು.
ರಾಬಿನ್ ಗಾಡ್‌ವಿನ್, ಪೋಸ್ಟ್ ಮಾಸ್ಟರ್, ಸುಂಟಿಕೊಪ್ಪನಮ್ಮಂತಹ ಯುವ ಸಮೂಹ ನಾಗರಿಕ ಪರೀಕ್ಷೆ ಬರೆಯಲು ಆಸಕ್ತಿ ಹೊಂದಿದ್ದರೂ ಸ್ಥಳೀಯವಾಗಿ ಮಾರ್ಗದರ್ಶನದ ಕೊರತೆ ಇದೆ. ಶಾಲಾ ಹಂತದಲ್ಲೇ ಮಕ್ಕಳಿಗೆ ಈ ಬಗ್ಗೆ ಜಾಗೃತಿ ಮೂಡಿಸುವಂತ ವಾತಾವರಣ ನಿರ್ಮಾಣ ಆಗಬೇಕು. ಕನಿಷ್ಠ ಜಿಲ್ಲಾಕೇಂದ್ರದಲ್ಲಾದರೂ ಸುಸಜ್ಜಿತ ಕೋಚಿಂಗ್ ಸೆಂಟರ್ ಇರಬೇಕು. ಸರ್ಕಾರವೇ ಆರಂಭಿಸಿದರೆ ಇನ್ನೂ ಉತ್ತಮ. ಈ ನಿಟ್ಟಿನಲ್ಲಿ ನಮ್ಮ ನೂತನ ವಿದ್ಯಾವಂತ, ಯುವ ಶಾಸಕರು ಗಮನಹರಿಸಲಿ.
ಚಾಂದಿನಿ ಪೋರೆಯನ, ಖಾಸಗಿ ಸಂಸ್ಥೆ ಉದ್ಯೋಗಿ, ಕುಶಾಲನಗರ