

ನಾಗಮಂಗಲ: ಜಾನುವಾರುಗಳಿಂದ ಸಂಭವಿಸುವಂತಹ ಆರ್ಥಿಕ ನಷ್ಟವನ್ನು ತಪ್ಪಿಸುವ ಸದುದ್ದೇಶದಿಂದ ಸರ್ಕಾರ ರಾಸು ವಿಮೆ ಜಾರಿಗೊಳಿಸಿದ್ದು, ಪ್ರತಿಯೊಬ್ಬ ರೈತರು ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿ ಎಂದು ಮನ್ಮುಲ್ ನಿರ್ದೇಶಕ ಲಕ್ಷ್ಮೀನಾರಾಯಣಗೌಡ ಹೇಳಿದರು.
ತಾಲೂಕಿನ ಹೊಣಕೆರೆ ಹೋಬಳಿಯ ಸುಖಧರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ 2024-25ನೇ ಸಾಲಿನ ಜಾನುವಾರು ವಿಮಾ ಯೋಜನೆಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ರೈತರು ಆರ್ಥಿಕವಾಗಿ ಸಬಲರಾಗಲು ಹೈನುಗಾರಿಕೆ ಎಷ್ಟು ಮುಖ್ಯವೋ ಅಷ್ಟೇ ಪ್ರಮಾಣದಲ್ಲಿ ಕೆಲವು ರೈತರು ಹೈನುಗಾರಿಕೆಯಿಂದ ನಷ್ಟವನ್ನು ಅನುಭವಿಸುತ್ತಿದ್ದಾರೆ. ಲಕ್ಷಾಂತರ ರೂ. ವ್ಯಯಿಸಿ ಹಸು, ಎಮ್ಮೆಗಳನ್ನು ಸಾಕುತ್ತಿದ್ದಾರೆ. ಆದರೆ ಕೆಲ ಹವಾಮಾನ ವೈಪರಿತ್ಯ ಹಾಗೂ ಕೆಲ ರೋಗ ರುಜಿನಗಳಿಗೆ ತುತ್ತಾಗಿ ಲಕ್ಷಾಂತರ ರೂ. ನಷ್ಟ ಅನುಭವಿಸುತ್ತಾರೆ. ಇದನ್ನು ತಪ್ಪಿಸಲು ಎಲ್ಲ ರೈತರಿಗೂ ಮನ್ಮುಲ್‌ನಿಂದ ರಾಸು ವಿಮೆ ಮಾಡಿಸಲಾಗುತ್ತಿದೆ. ತಪ್ಪದೆ ಎಲ್ಲ ರೈತರು ವಿಮೆ ಮಾಡಿಸಿಕೊಳ್ಳಿ. ವಿಮೆ ಮಾಡಿಸಿಕೊಂಡರೆ ಯಾವುದಾದರೂ ಅನಾಹುತಗಳಾದ ಸಂದರ್ಭಗಳಲ್ಲಿ ಸಾವಿರಾರು ರೂ. ಹಣವನ್ನು ವಿಮಾ ಕಂಪನಿಯಿಂದ ಪಡೆಯಬಹುದು. ಹೈನುಗಾರರ ಪರವಾಗಿ ಮನ್ಮುಲ್ ಸದಾ ಇರಲಿದ್ದು, ರೈತರು ಗುಣಮಟ್ಟದ ಹಾಲನ್ನು ಸಂಘಕ್ಕೆ ನೀಡಬೇಕು ಎಂದು ಮನವಿ ಮಾಡಿದರು.
ಕಳೆದ ಸಾಲಿನಲ್ಲಿ ನಮ್ಮ ತಾಲೂಕಿನಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ರಾಸುಗಳಿಗೆ ಮನ್ಮುಲ್ ವತಿಯಿಂದ ವಿಮೆ ಮಾಡಿಸಲಾಗಿದ್ದು, ಈ ಬಾರಿ 20 ಸಾವಿರಕ್ಕೂ ಹೆಚ್ಚು ರಾಸುಗಳಿಗೆ ವಿಮೆ ಮಾಡಿಸುವ ಗುರಿ ಹೊಂದಿದ್ದೇವೆ. ರಾಸು ವಿಮೆ ಹಣ ರೈತರಿಗೆ ಹೊರೆಯಾಗುತ್ತದೆ ಎಂದು ಒಟ್ಟು ವಿಮಾ ವತಿಂಕೆಯ ಶೇ.50 ರಷ್ಟನ್ನು ಮನ್ಮುಲ್ ಪಾವತಿಸುತ್ತಿದೆ. ಇನ್ನುಳಿದ ಶೇ.50ರಷ್ಟು ವಿಮಾ ವಂತಿಕೆ ಹಣ ಮಾತ್ರ ರೈತರು ಪಾವತಿಸಿ ರಾಸು ವಿಮೆ ಮಾಡಿಸಿಕೊಳ್ಳಬೇಕಿದೆ. ಆದ್ದರಿಂದ ತಾಲೂಕಿನ ಪ್ರತಿಯೊಬ್ಬ ರೈತನು ಒಂದು ರಾಸುವಿಗೂ ವಿಮೆ ತಪ್ಪಿಸದಂತೆ ರಾಸುವಿಮೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದರು.
ಮನ್ಮುಲ್ ತಾಲೂಕು ವಿಭಾಗೀಯ ಮುಖ್ಯಸ್ಥ ಡಾ.ಸದಾಶಿವ, ಪಶುವೈದ್ಯಾಧಿಕಾರಿಗಳಾದ ಡಾ.ಕಿರಣ್, ಡಾ.ಚೈತ್ರಾ, ಡಾ.ಕೃಷ್ಣಕುಮಾರ್, ಡಾ.ಶಂಕರಯ್ಯ, ಮನ್ಮುಲ್ ವಿಸ್ತರಣಾಧಿಕಾರಿಗಳು ಇದ್ದರು.