

ಮಡಿಕೇರಿ: ರಾಷ್ಟ್ರೀಯ ಪಲ್ಸ್‌ಪೋಲಿಯೋ ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ಭಾನುವಾರ ಚಾಲನೆ ನೀಡಿದರು.
ನಗರದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಯ ಮಕ್ಕಳ ಲಸಿಕಾ ವಿಭಾಗದಲ್ಲಿ(ಜಿಲ್ಲಾಸ್ಪತ್ರೆ) ಶಿಶುವಿಗೆ ಪೋಲಿಯೊ ಹನಿ ನೀಡುವ ಮೂಲಕ ಚಾಲನೆ ನೀಡಿ ಮಾತನಾಡಿ, ಮಕ್ಕಳಿಗೆ ವಿಕಲತೆ ತಪ್ಪಿಸುವಲ್ಲಿ ೧೯೯೫ ರಿಂದ ಪೋಲಿಯೊ ಹನಿ ನೀಡುತ್ತಾ ಬರಲಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಸಕರಿಸುವಂತೆ ಮನವಿ ಮಾಡಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ವಿಶಾಲ್ ಕುಮಾರ್ ಮಾತನಾಡಿ, ೫ ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೊ ಹನಿ ಕೊಡಿಸಬೇಕು. ಯಾವುದೇ ಕಾರಣಕ್ಕೂ ಹಿಂಜರಿಕೆ ಬೇಡ ಎಂದು ಕೋರಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಂಜುಂಡಯ್ಯ ಮಾತನಾಡಿ, ಭಾತರವು ಈಗಾಗಲೇ ಪೋಲಿಯೊ ಮುಕ್ತವಾಗಿದೆ. ಆದರೂ ಹತ್ತಿರದ ರಾಷ್ಟ್ರಗಳಲ್ಲಿ ಪೋಲಿಯೊ ಕಾಣಿಕೊಂಡಿರುವುದರಿಂದ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಐದು ವರ್ಷದೊಳಗಿನ ಮಗುವಿಗೆ ಕಡ್ಡಾಯವಾಗಿ ಪೋಲಿಯೊ ಹನಿ ಕೊಡಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಆನಂದ್ ಮಾತನಾಡಿ, ರಾಷ್ಟ್ರದಲ್ಲಿ ೧೯೯೫ ರಿಂದ ಪೋಲಿಯೊ ಹನಿ ನೀಡುತ್ತ ಬರಲಾಗಿದೆ. ಆರಂಭದಲ್ಲಿ ೩ ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಹನಿ ನೀಡಲಾಗುತ್ತಿತ್ತು. ಬಳಿಕ ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಹನಿ ನೀಡಲಾಗುತ್ತಿದೆ. ಪೋಲಿಯೊ ಹನಿ ಕೊಡಿಸುವುದರಿಂದ ಮಕ್ಕಳಿಗೆ ಅಂಗವಿಕಲತೆ ಬರುವುದಿಲ್ಲ. ಆದ್ದರಿಂದ ಕಡ್ಡಾಯವಾಗಿ ಪೋಲಿಯೊ ಹನಿ ಕೊಡಿಸಬೇಕು. ಇದರಿಂದ ಉತ್ತಮ ಸಮಾಜ ಕಟ್ಟಲು ಸಾಧ್ಯ ಎಂದು ಪ್ರತಿಪಾದಿಸಿದರು.
ಈ ಹಿಂದೆ ಎಷ್ಟೇ ಬಾರಿ ಪೋಲಿಯೊ ಹನಿ ಕೊಡಿಸಿದ್ದರೂ ಸಹ, ಐದು ವರ್ಷದೊಳಗಿನ ಮಗುವಿಗೆ ಪೋಲಿಯೊ ಹನಿ ಹಾಕಿಸಬೇಕು. ತಪ್ಪು ಅಭಿಪ್ರಾಯಗಳಿಗೆ ಕಿವಿಗೊಡಬಾರದು. ಐದು ವರ್ಷದೊಳಗಿನ ಮಗು ಪೋಲಿಯೊ ಹನಿಯಿಂದ ವಂಚಿತವಾಗದಂತೆ ಗಮನಹರಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ನುಡಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ.ರಾಮಚಂದ್ರ ಕಾಮತ್ ಮಾತನಾಡಿ, ಈಗಾಗಲೇ ರಾಷ್ಟ್ರದಲ್ಲಿ ಪೋಲಿಯೊ ಮುಕ್ತವಾಗಿದ್ದರೂ ಸಹ ನೆರೆ ರಾಷ್ಟ್ರಗಳಲ್ಲಿ ೧೨ ಮಂದಿಗೆ ಪೋಲಿಯೊ ಕಾಣಿಕೊಂಡಿರುವುದರಿಂದ ರಾಷ್ಟ್ರದಲ್ಲಿ ಅಗತ್ಯ ಮುನ್ನೆಚ್ಚರ ವಹಿಸಲಾಗಿದೆ. ಪೋಲಿಯೊ ಹನಿ ಕೊಡಿಸುವುದು ಪೋಲಿಯೊ ವೈರಸ್ ತಡೆಯಲು ಅತ್ಯಂತ ಸುರಕ್ಷಿತವಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಪತಿ ರವೀಂದ್ರ ರೈ, ಜಿಲ್ಲಾ ಆಯೂಷ್ ಅಧಿಕಾರಿ ಡಾ.ರೇಣುಕಾದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಟರಾಜ, ಆರ್‌ಸಿಎಚ್ ಅಧಿಕಾರಿ ಡಾ.ಮಧುಸೂದನ, ತಾಲೂಕು ವೈದ್ಯಾಧಿಕಾರಿ ಡಾ.ಚೇತನ್, ಅರವಳಿಕೆ ತಜ್ಞ ಡಾ.ಧನಂಜಯ ಮೇದಪ್ಪ, ಡಾ.ಸಲ್ಮಾ, ಡಾ.ಹರ್ಷ, ಶ್ರೀನಾಥ್, ಶ್ರೀನಿವಾಸ್, ಪಾಲಕ್ಷ, ಭವಾನಿ, ದೇಚಮ್ಮ, ದೇವರಾಜು, ಇತರರು ಇದ್ದರು.