

ಶಿಗ್ಗಾಂವಿ: ತಾಲೂಕಿನ ತಡಸ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಬೇಕು ಹಾಗೂ ಕಾಯಂ ಆಗಿ ಒಬ್ಬರು ಎಂಬಿಬಿಎಸ್ ವೈದ್ಯರನ್ನು ನೇಮಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಕಾರ್ಯಕರ್ತರು ಸೋಮವಾರ ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು.
ತಾಲೂಕಿನಲ್ಲಿ ದೊಡ್ಡ ಗ್ರಾಮವಾಗಿರುವ ತಡಸ ಸುಮಾರು 20 ಸಾವಿರ ಜನಸಂಖ್ಯೆ ಹೊಂದಿದೆ. ಅಲ್ಲದೆ, ಸುತ್ತಲಿನ ಹತ್ತಾರು ಹಳ್ಳಿಗಳ ಜನರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರತಿನಿತ್ಯ ಚಿಕಿತ್ಸೆಗೆ ಬರುತ್ತಾರೆ. ಆದರೆ, ಆಸ್ಪತ್ರೆಯಲ್ಲಿ ಎಂಬಿಬಿಎಸ್ ವೈದ್ಯರಿಲ್ಲದ ಕಾರಣ ರೋಗಿಗಳು ಶಿಗ್ಗಾಂವಿ ಇಲ್ಲವೇ ಹುಬ್ಬಳ್ಳಿ ಶಹರಕ್ಕೆ ಚಿಕಿತ್ಸೆಗೆ ಹೋಗಬೇಕಾಗಿದೆ. ತುರ್ತು ಚಿಕಿತ್ಸೆಗಾಗಿ ರೋಗಿಗಳನ್ನು ಕರೆದುಕೊಂಡು ಹೋಗಲು ಈಗಿರುವ ಒಂದು ಆಂಬುಲೆನ್ಸ್ ಸಾಕಾಗುವುದಿಲ್ಲ. ಎರಡು ಆಂಬುಲೆನ್ಸ್‌ಗಳನ್ನು ಆಸ್ಪತ್ರೆಗೆ ನಿಯೋಜಿಸಬೇಕು. ರೋಗಿಗಳಿಗೆ ಅಗತ್ಯವಿರುವ ಎಲ್ಲ ಚಿಕಿತ್ಸಾ ಸೌಲಭ್ಯ ಒದಗಿಸಬೇಕು ಎಂದು ಆರೋಗ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ತಾಲೂಕು ಆರೋಗ್ಯ ಅಧಿಕಾರಿ ಡಾ. ಸತೀಶ ಎ.ಆರ್., ವೈದ್ಯರ ನೇಮಕ ಮತ್ತು ಹೆಚ್ಚುವರಿ ಆಂಬುಲೆನ್ಸ್ ವಾಹನ ನಿಯೋಜಿಸುವ ಬೇಡಿಕೆ ಕುರಿತು ಜಿಲ್ಲಾ ಆರೋಗ್ಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಕರವೇ ಗಜಸೇನೆಯ ತಾಲೂಕು ಅಧ್ಯಕ್ಷ ಶಂಕರ ಬಡಿಗೇರ, ತಡಸ ಗ್ರಾಮ ಘಟಕದ ಅಧ್ಯಕ್ಷ ದಾವಲಸಾಬ ಸಿಕಂದರ್, ರೇವಣಸಿದ್ದಯ್ಯ ಹಿರೇಮಠ, ಬ್ರಹ್ಮಾನಂದ ಕಮ್ಮಾರ, ರಾಮಣ್ಣ ಕಮ್ಮಾರ, ಮಕಬೂಲಸಾಬ್ ನವಲೂರ, ಅಪ್ಸರ್ ಡಾವಣಗೇರಿ, ಜಮೀರ್ ಕೊಲ್ಲಾಪೂರ, ಹಜರೇಸಾಬ್ ಕೊಲ್ಲಾಪೂರ, ಮಾಹಾವೀರ ಹಳ್ಳಿಯವರ, ಕೃಷ್ಣಾ ಬಡಿಗೇರ, ಶ್ರೀಧರ ಬಡಿಗೇರ, ಮಂಜು ಹುಬ್ಬಳ್ಳಿ, ಮೋಲಾಲಿ ಹುಚ್ಚುಸಾಬನವರ, ನಾರಾಯಣ ಬಡಿಗೇರ, ಲಾಲಪ್ಪ ಲಮಾಣಿ, ರಫೀಕ ಇಂಗಳಗಿ, ಮಂಜು ಇಂಗೋಲಿ, ಗಂಗಾಧರ ಚಿತ್ರಗಾರ, ಅದ್ದು ಕೊಲ್ಲಾಪೂರ, ಕರೀಂ ಖಾನಜಾದೆ, ಮಹಾಂತಯ್ಯ ಬಾಳಮಠ ಇತರರಿದ್ದರು.