ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಉಪವಿಭಾಗಾಧಿಕಾರಿಗೆ ಒತ್ತಾಯ

20 ckm DSS memorandum
ಕದ್ರಿಮಿದ್ರಿ ಗ್ರಾಮದಲ್ಲಿ ಸರ್ಕಾರಿ ಜಾಗ ಒತ್ತುವರಿ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಎಸಿಗೆ ಮನವಿ ಸಲ್ಲಿಸಿದರು. ಮಹೇಂದ್ರ ಸ್ವಾಮಿ, ಸುಂದ್ರೇಶ್, ಸ್ವಾಮಿ ಇದ್ದರು.
Published on

ಚಿಕ್ಕಮಗಳೂರು: ಅಕ್ರಮವಾಗಿ ಸರ್ಕಾರಿ ಜಾಗ ಒತ್ತುವರಿ ಮಾಡಿರುವುದನ್ನು ತೆರವುಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ಬಳಕೆ ಮಾಡಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಉಪವಿಭಾಗಾಧಿಕಾರಿ ಎಚ್.ಡಿ.ರಾಜೇಶ್‌ಗೆ ಮನವಿ ಸಲ್ಲಿಸಿದರು.
ಅಂಬಳೆ ಹೋಬಳಿಯ ಕದ್ರಿಮಿದ್ರಿ ಗ್ರಾಮದ ಸರ್ವೇ ನಂ.273ರಲ್ಲಿ ಅನಧಿಕೃತವಾಗಿ ಮನೆ ಹಾಗೂ ಒತ್ತುವರಿ ಮಾಡಿಕೊಂಡಿರುವ ಜಾಗ ಖುಲ್ಲಾಗೊಳಿಸಬೇಕು ಎಂದು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ಮಾತನಾಡಿ, ರಾಂಪುರ ಗ್ರಾಮದ ಮಹಿಳೆಯೊಬ್ಬರು ಅನಧಿಕೃತವಾಗಿ 3 ಎಕರೆ ಜಾಗದಲ್ಲಿ ಮನೆ ಹಾಗೂ ಸಾಗುವಳಿ ಮಾಡಿಕೊಂಡಿದ್ದರು. ಈ ಜಾಗಕ್ಕಾಗಿ ಸಲ್ಲಸಿದ 94 ಸಿಗೆ ಅರ್ಜಿ ವಜಾಗೊಂಡಿದೆ ಎಂದರು.
ಜಾಗ ತೆರವುಗೊಳಿಸುವ ಸಂಬಂಧ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೇ ನಡೆಸಲು ಆದೇಶಿದೆ. ಈ ಸರ್ವೇ ನಂಬರ್ ನಗರ ವ್ಯಾಪ್ತಿಯಲ್ಲಿ ಇರುವುದರಿಂದ ಸಾಗುವಳಿ ಚೀಟಿ ನೀಡಲು ಬರುವುದಿಲ್ಲ. ಈ ಬಗ್ಗೆ ತಹಸೀಲ್ದಾರ್ ಕ್ರಮ ಕೈಗೊಂಡಿದ್ದರೂ ಜಾಗ ಖುಲ್ಲಾಗೊಳಿಸಿಲ್ಲ ಎಂದರು.
ಈಗಾಗಲೇ ಗ್ರಾಮದ ಮಹಿಳೆಯ ಬಳಿ ವಾಸದ ಮನೆ, ಮಕ್ಕಳು ಹಾಗೂ ಗಂಡನ ಹೆಸರಿನಲ್ಲಿ ಹಲವಾರು ನಿವೇಶನಗಳಿವೆ. ಇದಕ್ಕೆ ಸಂಬಂಧಿಸಿದಂತೆ ಹಿಂದೆಯೇ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಸರ್ಕಾರಿ ಜಾಗವಾಗಿರುವ ಈ ಸರ್ವೇ ನಂಬರ್‌ನಲ್ಲಿ ಭೂ ಅಧಿನಿಯಮದ ಪ್ರಕಾರ ತೆರವುಗೊಳಿಸಿ ಸರ್ಕಾರದ ಯಾವುದಾದರೂ ಯೋಜನೆಗೆ ಬಳಸಿಕೊಳ್ಳಬೇಕು. ಈ ಕೂಡಲೇ ಜಾಗದ ವಿಚಾರವಾಗಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net