ವಸತಿ, ನಿವೇಶನ ರಹಿತರ ಸಮಸ್ಯೆ ಪರಿಹಾರಕ್ಕೆ ಒತ್ತಾಯ

31 ckm 4
ಚಿಕ್ಕಮಗಳೂರು ತಾಲೂಕು ಮಲ್ಲಂದೂರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ ಸಿಪಿಐ ಕಾರ್ಯಕರ್ತರು ವಸತಿ ಮತ್ತು ನಿವೇಶನ ರಹಿತರಿಗೆ ನಿವೇಶನ ಮಂಜೂರುಗೊಳಿಸಿ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು. ಕೆರೆಮಕ್ಕಿ ರಮೇಶ್, ರಾಧಾ ಸುಂದ್ರೇಶ್, ಜಯನಂದ್, ಟಿ.ಎಸ್.ಸಂಜೀವ, ಕೆರೆಮಕ್ಕಿ ಕಲ್ಲೇಶ್, ನಾರಾಯಣ, ಅಪ್ಪು, ಸತೀಶ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ವಸತಿ ಮತ್ತು ನಿವೇಶನ ರಹಿತರಿಗೆ ನಿವೇಶನ ಮಂಜೂರುಗೊಳಿಸಿ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿ ಸಿಪಿಐ ನೇತೃತ್ವದಲ್ಲಿ ತಾಲೂಕಿನ ಮಲ್ಲಂದೂರು ಗ್ರಾಮದ ನಾಡ ಕಚೇರಿ ಎದುರು ಸಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸಿಪಿಐ ತಾಲೂಕು ಅಧ್ಯಕ್ಷ ಕೆರೆಮಕ್ಕಿ ರಮೇಶ್, ನಿವೇಶನ ರಹಿತರು ನಾಗರೀಕ ಬದುಕಿನ ಮೂಲಭೂತ ಹಕ್ಕಿನಿಂದ ವಂಚಿತರಾಗಿ ಸಂಕಷ್ಟದÀ ಜೀವನ ನಡೆಸುತ್ತಿದ್ದಾರೆ. ಆವತಿ ಹೋಬಳಿಯಲ್ಲೂ ಸಹ ನಿವೇಶನ ಮತ್ತು ವಸತಿ ರಹಿತರ ಸಮಸ್ಯೆ ವಿಪರೀತವಾಗಿದೆ ಎಂದರು.
ನಿವೇಶನ ರಹಿತರ ಸಮಸ್ಯೆಗಳ ಬಗ್ಗೆ ಹಲವು ಬಾರಿ ಪ್ರತಿಭಟನೆಗಳ ಮೂಲಕ ರಾಜ್ಯ ಸರ್ಕಾರ, ಜಿಲ್ಲಾ ಡಳಿತ ಹಾಗೂ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರೂ ಸಹ ಕೇವಲ ಭರವಸೆಗಳ ಹೊರತಾಗಿ ನಿವೇಶನ ಹಂಚುವ ಹಾಗೂ ಮನೆಗಳನ್ನು ನಿರ್ಮಿಸುವ ಬಗ್ಗೆ ಯಾವ ಕ್ರಮ ಕೈಗೊಂಡಿರುವುದಿಲ್ಲ ಎಂದು ದೂರಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಕುಟುಂಬಕ್ಕೆ ಒಂದು ಮನೆ ನೀಡುವುದಾಗಿ ಪ್ರಣಾಳಿಕೆಯಲ್ಲಿ ಪ್ರಕಟಿಸಿತ್ತು. ಸರ್ಕಾರ ಅಧಿಕಾರಕ್ಕೆ ಬಂದು ಅನೇಕ ತಿಂಗಳಾದರೂ ನಿವೇಶನ ಮತ್ತು ವಸತಿ ರಹಿತರ ಸಮಸ್ಯೆಗಳಿಗೆ ಕಾಯಕಲ್ಪ ಕಲ್ಪಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಸ್ತುತ ಕಾಡು ಪ್ರಾಣಿಗಳು ನಾಡಿಗೆ ವಲಸೆ ಬರುತ್ತಿವೆ. ಇದಕ್ಕೆ ಮೂಲ ಕಾರಣ ಸರ್ಕಾರ ಮತ್ತು ಅರಣ್ಯ ಇಲಾಖೆಯ ಹೊಸನೀತಿ ಹಾಗೂ ಬೇಜವಾಬ್ದಾರಿತನ. ಕಾಡಿನಲ್ಲಿ ಹಣ್ಣಿನ ಗಿಡಗಳು, ಬೈನೆ ಮತ್ತು ಬಿದಿರು ಮರಗಳನ್ನು ಬೆಳೆಸುವದನ್ನು ಕೈಬಿಟ್ಟು ಅಕೇಶಿಯಾ, ತೇಗದ ಮರ ಬೆಳೆಸುತ್ತಿರುವ ಕಾರಣ ವನ್ಯಜೀವಿಗಳು ನಾಡಿನತ್ತ ಧಾವಿಸುತ್ತಿದೆ ಎಂದು ಹೇಳಿದರು.
ನಿವೇಶನ ಹಂಚಿಕೆಗೆ ಅಗತ್ಯವಿರುವ ಸರ್ಕಾರಿ ಭೂಮಿಯನ್ನು ಕಾಯ್ದಿರಿಸಲು ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಸರ್ವೆ ಮಾಡಿ ಕಂದಾಯ ಭೂಮಿಯನ್ನು ಗುರುತು ಮಾಡಬೇಕು. ವಸತಿ ರಹಿತರು ಗ್ರಾಮ ಪಂಚಾಯಿತಿಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಜಿಲ್ಲೆಯಾದ್ಯಂತ ಒತ್ತುವರಿ ಖಲ್ಲಾ ಮಾಡಿ ಕ್ರಮ ಜರುಗಿಸಲಾಗುತ್ತಿದೆ. ಇದರಿಂದ ಬಹಳಷ್ಟು ರೈತರು ಭೂಮಿ ಕಳೆದುಕೊಂಡು ನಿರಾಶ್ರಿತರಾಗುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಂಡು ಕನಿಷ್ಟ ೨೫ ಎಕರೆ ಒಳಗಿನ ಒತ್ತುವರಿಯನ್ನು ತೆರವುಗೊಳಿಸಬಾರದು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ರಾಧಾ ಸುಂದ್ರೇಶ್, ಹೋಬಳಿ ಕಾರ್ಯದರ್ಶಿ ಜಯನಂದ್, ಸಹ ಕಾರ್ಯದರ್ಶಿಗಳಾದ ಟಿ.ಎಸ್.ಸಂಜೀವ, ಕೆರೆಮಕ್ಕಿ ಕಲ್ಲೇಶ್, ಶಾಖಾ ಕಾರ್ಯದರ್ಶಿಗಳಾದ ನಾರಾಯಣ, ಅಪ್ಪು, ಸತೀಶ್, ಖಜಾಂಚಿ ಲಕ್ಷ್ಮೀ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net