

ಚಿಕ್ಕಮಗಳೂರು: ಸರ್ಕಾರಿ ಜಮೀನಿನಲ್ಲಿ ಸರ್ವೆ ನಡೆಸಿ ಅರ್ಹರಿಗೆ ನಿವೇಶನಕ್ಕಾಗಿ ಜಾಗವನ್ನು ಕಾಯ್ದಿರಿಸಬೇಕು ಎಂದು ಹೊಯ್ಸಳಲು, ಚಿನ್ನಿಗ, ಹೊಸಮನೆ, ಮರಬೈಲು ಹಾಗೂ ಅಣಜೂರು ಗ್ರಾಮಸ್ಥರು ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ದಲಿತ ಸಂಘರ್ಷ ಸಮಿತಿ ಮುಖಂಡ ಸುಂದ್ರೇಶ್, ಮೂಡಿಗೆರೆ ತಾಲೂಕಿನ ಜಿ.ಅಗ್ರಹಾರ ಗ್ರಾಮದ ಸರ್ವೆ ನಂ.೬೭ರ ಸರ್ಕಾರಿ ಜಾಗದಲ್ಲಿ ಗ್ರಾಮಸ್ಥರು ಕಳೆದ ಎರಡೂವರೆ ದಶಕಗಳ ಕಾಲ ಗುಡಿಸಲು ಹಾಕಿಕೊಂಡು ವಾಸಿಸುತ್ತಿದ್ದಾರೆ. ಪ್ರಸ್ತುತ ಪಡಿತರ ಚೀಟಿ, ಆಧಾರ್‌ಕಾರ್ಡ್ ಹಾಗೂ ವೋಟರ್ ಐಡಿ ಕಾರ್ಡ್ನ್ನು ಮಾತ್ರ ಅಲಂಬಿಸಿ ಜೀವನ ಸುಧಾರಿಸುತ್ತಿರುವ ನಿವಾಸಿಗಳಿಗೆ ಸೂಕ್ತ ನಿವೇಶನವಿಲ್ಲ. ಈ ಸಂಬAಧ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಲಾಗಿದೆಯಾದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ಇದುವರೆಗೂ ಸರ್ಕಾರದಿಂದ ನಿವೇಶನ ಅಥವಾ ವಸತಿ ಸೌಲಭ್ಯ ಲಭ್ಯವಾಗಿಲ್ಲ. ಹಾಲಿ ವಾಸವಿರುವ ಜಿ.ಅಗ್ರಹಾರದ ಗ್ರಾಮದ ಸರ್ಕಾರಿ ಜಮೀನನ್ನು ಸರ್ವೆ ನಡೆಸಿ ಕನಿಷ್ಟ ೩೦*೪೦ ಅಳತೆಯ ನಿವೇಶನ ಗಳನ್ನಾಗಿ ಮಂಜೂರು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸರ್ಕಾರಿ ಜಾಗದಲ್ಲಿ ಸದ್ಯಕ್ಕೆ ಯಾವುದೇ ತಂಟೆ-ತಕರಾರು ಇರುವುದಿಲ್ಲ. ಹೀಗಾಗಿ ವಸತಿ ನಿರ್ಮಿಸಲು ನಿವೇಶನಕ್ಕೆ ಸರ್ವೆ ನಡೆಸಿ ಉಳಿಕೆ ಜಮೀನನ್ನು ಗೋಣಿಬೀಡು ಪಂಚಾಯಿತಿಗೆ ನಿವೇಶನಕ್ಕಾಗಿ ನೀಡಬೇಕು ಎಂದು ಒತ್ತಾಯಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಛಲವಾದಿ ಸಂಘದ ಅಧ್ಯಕ್ಷ ರಘು, ಗ್ರಾಮಸ್ಥರಾದ ಶಂಕರ್, ಮಂಜಪ್ಪ, ರಾಕೇಶ್, ಅಣ್ಣಪ್ಪ, ಶಾರದಾ, ಲಕ್ಷ್ಮೀ, ಮಂಜುಳಾ, ಪಲ್ಲವಿ ಮತ್ತಿತರರಿದ್ದರು.