

ಹಾಸನ: ಬೇಲೂರು ಪುರಸಭೆಗೆ ಅರ್ಹ ನೌಕರರನ್ನು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲು ಪುರಸಭೆ ಸದಸ್ಯರೊಂದಿಗೆ ನಿಯೋಗ ಹೋಗಲಾಗುವುದು ಎಂದು ಶಾಸಕ ಎಚ್.ಕೆ.ಸುರೇಶ್ ತಿಳಿಸಿದರು.
ಪಟ್ಟಣದ ಪುರಸಭೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಇಂಜಿನಿಯರ್ ಹಾಗೂ ಅಧಿಕಾರಿಗಳು ಈ ಪುರಸಭೆಯಲ್ಲಿಲ್ಲ. ಹಾಗಾಗಿ, ಅರ್ಹ ನೌಕರರನ್ನು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲು ಪುರಸಭೆ ಸದಸ್ಯರೊಂದಿಗೆ ನಿಯೋಗ ಹೋಗಲಾಗುವುದು ಎಂದರು.
2021-22ರಲ್ಲಿ ಕ್ರಿಯಯೋಜನೆಯಾದ ಕಾಮಗಾರಿಗಳು ಇನ್ನೂ ಅನುಷ್ಠಾನವಾಗಿಲ್ಲ. ಹೀಗಿರುವಾಗ ಅಭಿವೃದ್ಧಿ ಹೇಗೆ ಸಾಧ್ಯ? ಕ್ರಿಯಾ ಯೋಜನೆಗಳ ವಿಳಂಬಕ್ಕೆ ಕಾರಣರಾದ ನೌಕರರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಪತ್ರ ಬರೆಯಬೇಕು ಎಂದರು.
ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿ, ಹಿಂದೆ ಆಡಳಿತಾಧಿಕಾರಿಗಳಿದ್ದ ವೇಳೆ ಕ್ರಿಯಾಯೋಜನೆಯಾದ 7.5 ಕೋಟಿ ರೂ. ಅನುದಾನ ಎಲ್ಲ ವಾರ್ಡ್‌ಗಳಿಗೂ ಸಮಪ್ರಮಾಣದಲ್ಲಿ ಹಂಚಿಕೆಯಾಗದ ಕಾರಣ ಮರು ಕ್ರಿಯಾಯೋಜನೆಗಾಗಿ ಜಿಲ್ಲಾಧಿಕಾರಿಗಳ ಬಳಿ ಮನವಿ ಮಾಡಿದ ಪರಿಣಾಮ ಅವರು ಒಪ್ಪಿಗೆ ಪತ್ರ ನೀಡಿದ್ದಾರೆ. ಆದ್ದರಿಂದ ಶಾಸಕರು ಕುಳಿತು ಎಲ್ಲಾ 23 ವಾರ್ಡ್ ಗಳಿಗೂ ಅಗತ್ಯವಿರುವ ಕಾಮಗಾರಿ ಮಾಡಿಸಲು ಅನುದಾನ ಹಂಚಿಕೆ ಮಾಡಬೇಕು ಹಾಗೂ ಶಾಸಕರ ಅನುದಾನದಲ್ಲಿ ಪುರಸಭೆಗೆ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ಸದಸ್ಯರಾದ ತೀರ್ಥಕುಮಾರಿ ವೆಂಕಟೇಶ್, ಜಿ.ಶಾಂತಕುಮಾರ್, ಬಿ.ಎ.ಜಮಾಲೂದ್ದೀನ್, ಮೀನಾಕ್ಷಿ, ಬಿ.ಗಿರೀಶ್ ತಮ್ಮ ಸಮಸ್ಯೆಗಳನ್ನು ಶಾಸಕರ ಮುಂದೆ ತೋಡಿಕೊಂಡು ಪರಿಹರಿಸುವಂತೆ ಮನವಿ ಮಾಡಿದರು.
ಬಾಕ್ಸ್ ನ್ಯೂಸ್: ಸಭೆ ಪ್ರಾರಂಭವಾದ ನಂತರ ಸದಸ್ಯ ಜಿ.ಶಾಂತಕುಮಾರ್ ಮಾತನಾಡುವ ಸಂದರ್ಭ ಸದಸ್ಯ ಜಗದೀಶ್ ಆಕ್ಷೇಪ ವ್ಯಕ್ತಪಡಿಸಿ, ನಾವು ಪ್ರತಿಸಭೆಯಲ್ಲೂ ಇವರ ಕಥೆ ಕೇಳಲು ಬರಬೇಕಾ, ಸಭೆಯ ಅಜೆಂಡಾ ಬಿಟ್ಟು ಬೇರೆ ಮಾತನಾಡುತ್ತಿದ್ದಾರೆ ಎಂದಾಗ ಸದಸ್ಯರ ನಡುವೆ ಮಾತಿನ ಚಕಮಾಕಿ ನಡೆದು ಶಾಸಕರು ಸದಸ್ಯರನ್ನು ಸಮಾಧಾನ ಪಡಿಸಿದರು.
ಪುರಸಭೆ ಮುಖ್ಯಾಧಿಕಾರಿ ಸುಜಯ್ ಕುಮಾರ್, ಉಪಾಧ್ಯಕ್ಷೆ ಉಷಾ, ಸದಸ್ಯರಾದ ಸಿ.ಎನ್.ದಾನಿ, ರತ್ನಮ್ಮ, ದಿವ್ಯಾ ಇತರರು ಇದ್ದರು.