ಮನೆ, ನಿವೇಶನ ಒದಗಿಸಲು ಒತ್ತಾಯ

SOMAPPA H.M
Published on

ಮಡಿಕೇರಿ: ಕೊಡಗಿನಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಾ ತೋಟದ ಲೈನ್‌ಮನೆಗಳಲ್ಲಿ ಹಾಗೂ ಬಾಡಿಗೆ ಮನೆಗಳಲ್ಲಿ ವಾಸವಿರುವ ಶೋಷಿತ ಜನಾಂಗದ ಫಲಾನುಭವಿಗಳನ್ನು ಗುರುತಿಸಿ ಮನೆ ಅಥವಾ ನಿವೇಶನವನ್ನು ಕಲ್ಪಿಸಿಕೊಡಬೇಕೆಂದು ಯುನೈಟೆಡ್ ಪ್ಲಾಂಟೇಷನ್ ವರ್ಕರ್ಸ್‌ ಯೂನಿಯನ್ ಒತ್ತಾಯಿಸಿದೆ.


ಈ ಕುರಿತು ಮುಖ್ಯಮಂತ್ರಿಗಳಿಗೆ ಈಗಾಗಲೇ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ತಿಳಿಸಿರುವ ಯೂನಿಯನ್‌ನ ಜಿಲ್ಲಾಧ್ಯಕ್ಷ ಎಚ್.ಎಂ.ಸೋಮಪ್ಪ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.


ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡ ಮತ್ತು ಜಾತಿಗಳಿಗೆ ಸೇರಿದವರು ಗಣನೀಯ ಸಂಖ್ಯೆಯಲ್ಲಿದ್ದಾರೆ. ತೋಟ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಹಮಾಲಿ ಕಾರ್ಮಿಕರು ಮತ್ತಿತರ ಶ್ರಮಿಕ ವರ್ಗ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ, ಇಂದಿಗೂ ಸ್ವಂತ ಸೂರು ಹೊಂದಲು ಇವರಿಂದ ಸಾಧ್ಯವಾಗಿಲ್ಲ. ಕೊಡಗಿನಲ್ಲಿರುವ ಸರ್ಕಾರಿ ಪೈಸಾರಿ ಜಮೀನಿನ ಸಮಗ್ರ ಸರ್ವೆ ನಡೆಸಬೇಕು, ಹೊರ ರಾಜ್ಯದಿಂದ ಬಂದು ಪೈಸಾರಿ ಜಮೀನನ್ನು ಕಸಿದುಕೊಂಡಿರುವ ಉಳ್ಳವರನ್ನು ಪತ್ತೆ ಹಚ್ಚಿ ತೆರವುಗೊಳಿಸಬೇಕು. ಈ ಜಮೀನನ್ನು ಜಿಲ್ಲೆಯ ಬುಡಕಟ್ಟು ಜನರು, ಕೂಲಿ ಕಾರ್ಮಿಕರು, ಭೂರಹಿತ ಸೈನಿಕರು, ವಿಧವೆಯರು ಮತ್ತಿತರ ಅರ್ಹರಿಗೆ ಹಂಚಬೇಕು ಎಂದು ಒತ್ತಾಯಿಸಿದ್ದಾರೆ.


ಭೂರಹಿತ ಸಣ್ಣ ಹಿಡುವಳಿದಾರರ ಭೂಮಿಯನ್ನು ವಶಕ್ಕೆ ಪಡೆಯುತ್ತಿರುವುದು ಖಂಡನೀಯ. ಜಮೀನು ಹೊಂದಿರುವವರಿಗೆ ಮತ್ತೆ ಗುತ್ತಿಗೆ ಆಧಾರದಲ್ಲಿ ಜಮೀನು ನೀಡುವ ಈ ಹಿಂದಿನ ಬಿ.ಜೆ.ಪಿ ಸರ್ಕಾರದ ನಿರ್ಧಾರವನ್ನು ಈಗಿನ ಸರ್ಕಾರ ಕೈಬಿಡಬೇಕು. ಶೋಷಿತ ಜನಾಂಗಕ್ಕೆ ಪ್ರಧಾನಮಂತ್ರಿಯವರ ಸರ್ವರಿಗೂ ಸೂರು ಯೋಜನೆಯಡಿ ಮನೆ ನಿರ್ಮಿಸಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ಸೋಮಪ್ಪ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net