

ನಾಯಕನಹಟ್ಟಿ: ನಾಯಕನಹಟ್ಟಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸುವಂತೆ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಒತ್ತಾಯಿಸಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಶಾಸಕನಾಗಿದ್ದಾಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಿದ್ದೆ. ಪಟ್ಟಣದ ಸಮೀಪ 50 ಎಕರೆ ಸರ್ಕಾರಿ ಜಮೀನಿದೆ. ಪ್ರತಿ ವರ್ಷ ಜರುಗುವ ಜಾತ್ರೆಗೆ 5 ಲಕ್ಷಕ್ಕೂ ಹೆಚ್ಚು ಜನರು ಆಗಮಿಸುತ್ತಾರೆ ಎಂದರು.
ಶ್ರಾವಣ ಮಾಸ, ಕಾರ್ತಿಕೋತ್ಸವಗಳು ಸೇರಿ ಪ್ರತಿನಿತ್ಯ ಸಾವಿರಾರು ಭಕ್ತರು ದೇವಾಲಯಕ್ಕೆ ಬರುತ್ತಾರೆ. ದೊಡ್ಡ ಪ್ರಮಾಣದ ಮೂಲ ಸೌಲಭ್ಯಗಳ ಅವಶ್ಯಕತೆಯಿದೆ. ತಳಕು, ತುರುವನೂರು ಹಾಗೂ ತೊರೆ ಸಾಲಿನಲ್ಲಿರುವ ಕಮಂಡಲಗುಂದಿ, ಸಾಲಹಳ್ಳಿ, ಸಿದ್ದಿಹಳ್ಳಿ, ಹುಡೇಂ ಸೇರಿ ವಿವಿಧ ಗ್ರಾಮಗಳನ್ನು ನೂತನ ತಾಲೂಕಿಗೆ ಸೇರಿಸಬಹುದಾಗಿದೆ ಎಂದು ತಿಳಿಸಿದರು.
ನಾಯಕನಹಟ್ಟಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಲು ಎಲ್ಲ ಅರ್ಹತೆ ಮತ್ತು ಅವಕಾಶಗಳಿವೆ. ನಾಯಕನಹಟ್ಟಿ ಪಟ್ಟಣ ಸ್ವಾತಂತ್ರೃದ ನಂತರ ಮೊದಲ ಮುನ್ಸಿಪಲ್ ಸಂಸ್ಥೆಯಾಗಿತ್ತು. ಕ್ಷೇತ್ರದಲ್ಲಿ ಬದ್ಧತೆ ಹೊಂದಿರುವ ಶಾಸಕರಿದ್ದು, ತಾಲೂಕು ಕೇಂದ್ರವನ್ನಾಗಿಸಲು ಪ್ರಯತ್ನ ನಡೆಸಬೇಕು ಎಂದರು.
ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಪಿ.ಶಿವಣ್ಣ ಮಾತನಾಡಿ, ನಾಯಕನಹಟ್ಟಿ ಪಟ್ಟಣ ಪಂಚಾಯಿತಿಯಾಗಿದ್ದು, ಚಳ್ಳಕೆರೆ ತಾಲೂಕಿನಲ್ಲಿ ಅತ್ಯಂತ ದೊಡ್ಡ ಪಟ್ಟಣ ಎನಿಸಿಕೊಂಡಿದೆ. ಜಿಲ್ಲೆಯಲ್ಲಿಯೇ ಅತ್ಯಂತ ದೊಡ್ಡ ಧಾರ್ಮಿಕ ಕ್ಷೇತ್ರವಾಗಿದೆ. ಸಮುದಾಯ ಆಸ್ಪತ್ರೆ, ಪೊಲೀಸ್ ಠಾಣೆ, ರಾಜ್ಯ ಹೆದ್ದಾರಿ ಸೇರಿ ಅಗತ್ಯ ಸೌಲಭ್ಯಗಳಿವೆ ಎಂದರು.
ಸುತ್ತಲಿನ 55 ಗ್ರಾಮಗಳಿಗೆ ಈ ಪಟ್ಟಣವು ಕೇಂದ್ರವಾಗಿದೆ. ಎರಡು ರಾಷ್ಟ್ರೀಯ ಹೆದ್ದಾರಿಗಳು 20 ಕಿ.ಮೀ ಅಂತರದಲ್ಲಿವೆ. 15 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಐದು ಕಿ.ಮೀ ದೂರದಲ್ಲಿ ಐಐಎಸ್ಸಿ, ಡಿಆರ್‌ಡಿಒ ಸೇರಿ ದೇಶದ ಪ್ರಮುಖ ವೈಜ್ಞಾನಿಕ ಸಂಸ್ಥೆಗಳಿವೆ ಎಂದು ತಿಳಿಸಿದರು.
ದೊಡ್ಡ ಉಳ್ಳಾರ್ತಿ ಮತ್ತು ಕುದಾಪುರ ವೈಜ್ಞಾನಿಕ ಸಂಸ್ಥೆಗಳಿಗೆ ಪಟ್ಟಣವು ಪ್ರಮುಖ ವಾಣಿಜ್ಯ ಮತ್ತು ಧಾರ್ಮಿಕ ಕೇಂದ್ರವಾಗಿದೆ. ಹೀಗಾಗಿ ತಾಲೂಕು ಕೇಂದ್ರವಾಗಲು ಎಲ್ಲ ಅರ್ಹತೆಗಳನ್ನು ಹೊಂದಿದೆ. ಇದಕ್ಕಾಗಿ ಹೋಬಳಿಯ ಎಲ್ಲ ಸಂಘಟನೆಗಳು ಹಾಗೂ ಪಕ್ಷಗಳ ಸಭೆ ಕರೆಯಲಾಗುವುದು ಎಂದು ಹೇಳಿದರು.
ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಎಂ.ವೈ.ಟಿ.ಸ್ವಾಮಿ, ಪಿ.ಬಿ.ತಿಪ್ಪೇಸ್ವಾಮಿ, ಫಯಾಜ್ ಮತ್ತಿತರರಿದ್ದರು.