ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ

ಕಟ್ಟೆಮಲಳವಾಡಿ ತಂಬಾಕು ಹರಾಜು ಮಾರುಕಟ್ಟೆಗೆ ಸಂಸದ ಯದುವೀರ್ ಒಡೆಯರ್ ಭೇಟಿ ನೀಡಿದ್ದ ವೇಳೆ ರೈತ ಮುಖಂಡರು  ಮನವಿ ಪತ್ರ ಸಲ್ಲಿಸಿದರು. ಹೊಸೂರು ಕುಮಾರ್, ಬಿ.ಎನ್.ನಾಗರಾಜಪ್ಪ, ವಿಷಕಂಠಪ್ಪ, ಮೋದೂರು ಶಿವಣ್ಣ ಇದ್ದರು.
ಕಟ್ಟೆಮಲಳವಾಡಿ ತಂಬಾಕು ಹರಾಜು ಮಾರುಕಟ್ಟೆಗೆ ಸಂಸದ ಯದುವೀರ್ ಒಡೆಯರ್ ಭೇಟಿ ನೀಡಿದ್ದ ವೇಳೆ ರೈತ ಮುಖಂಡರು ಮನವಿ ಪತ್ರ ಸಲ್ಲಿಸಿದರು. ಹೊಸೂರು ಕುಮಾರ್, ಬಿ.ಎನ್.ನಾಗರಾಜಪ್ಪ, ವಿಷಕಂಠಪ್ಪ, ಮೋದೂರು ಶಿವಣ್ಣ ಇದ್ದರು.
Published on

ಹುಣಸೂರು: ವಾಣಿಜ್ಯ ಬೆಳೆ ತಂಬಾಕಿಗೆ ವಿಮಾ ಯೋಜನೆ ಜಾರಿಗೊಳಿಸುವುದು, ತಂಬಾಕು ಹದಗೊಳಿಸುವ ಬ್ಯಾರನ್‌ಗಳ ವಿಮಾ ಮೊತ್ತ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಮುಖಂಡರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಮನವಿ ಸಲ್ಲಿಸಿದರು.

ತಾಲೂಕಿನ ಕಟ್ಟೆಮಳಲವಾಡಿಯ ತಂಬಾಕು ಹರಾಜು ಮಾರುಕಟ್ಟೆಗೆ ಸಂಸದರು ಮಂಗಳವಾರ ಭೇಟಿ ನೀಡಿದ್ದ ಸಂದರ್ಭ ರೈತ ಮುಖಂಡರು ಮನವಿ ಸಲ್ಲಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ಈಗಿನ ಮಾರುಕಟ್ಟೆ ದರದಲ್ಲಿ ಪ್ರತಿ ಕೆಜಿಗೆ 120 ರೂ. ಕಡಿಮೆ ದರದಲ್ಲಿ ತಂಬಾಕನ್ನು ಖರೀದಿಸುತ್ತಿದ್ದಾರೆ. ಆಂಧ್ರಪ್ರದೇಶದಲ್ಲಿ ಈ ವರ್ಷದಲ್ಲಿ ಸರಾಸರಿ ಬೆಲೆಯು 320 ರೂ. ಇದ್ದು, ಉತ್ತಮ ತಂಬಾಕು ಪ್ರತಿ ಕೆಜಿಗೆ 419 ರೂ. ನೀಡಿರುತ್ತಾರೆ. ಆದರೆ ನಮ್ಮಲ್ಲಿ ಪ್ರಾರಂಭದಿಂದಲೂ ಉತ್ತಮ ದರ್ಜೆಯ ತಂಬಾಕಿಗೆ ಕೇವಲ 290 ರೂ.ಗಳಿಗೆ ಖರೀದಿ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಫಸಲ್ ಬಿಮಾ ಯೋಜನೆಗೆ ಒಳಪಡಲಿ: ಬೆಳೆ ನಷ್ಟವಾದಾಗ ರಾಜ್ಯ ಅಥವಾ ಕೇಂದ್ರ ಸರ್ಕಾರವಾಗಲಿ ಯಾವುದೇ ರೀತಿಯ ಪರಿಹಾರ ನೀಡುತ್ತಿಲ್ಲ. ಈ ಕಾರಣಕ್ಕಾಗಿ ತಂಬಾಕು ಬೆಳೆಗೆ ಬೆಳೆ ನಷ್ಟದ ವಿಮೆ ಪಡೆಯಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರದ ಫಸಲ್ ಬಿಮಾ ಯೋಜನೆಗೆ ಸೇರ್ಪಡೆ ಮಾಡಬೇಕು. ತಂಬಾಕು ಹದಮಾಡುವ ಬ್ಯಾರನ್‌ಗಳನ್ನು ನಿರ್ಮಿಸಲು ಇಂದಿನ ಮಾರುಕಟ್ಟೆ ದರದಲ್ಲಿ 5 ರಿಂದ 6 ಲಕ್ಷ ರೂ. ವೆಚ್ಚವಾಗುತ್ತಿದೆ. ಬೆಂಕಿ ಅನಾಹುತ ಅಥವಾ ಮಳೆಹಾನಿಯಿಂದ ಬ್ಯಾರನ್ ಹಾಳಾದಲ್ಲಿ ವಿಮಾ ಮೊತ್ತ ಈಗಿನ ದರದಂತೆ 1 ಲಕ್ಷ ರೂ.ಗಳಿದ್ದು, ಈ ಹಣದಲ್ಲಿ ತಂಬಾಕು ರೈತರಿಗೆ ಕೇವಲ 50 ರಿಂದ 60 ಸಾವಿರ ರೂ.ಗಳು ದೊರಕುತ್ತಿದೆ. ಆದ್ದರಿಂದ ವಿಮಾ ಮೊತ್ತವನ್ನು 1 ರಿಂದ 5 ಲಕ್ಷ ರೂ.ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ತಾಲೂಕು ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ಉಂಡುವಾಡಿ ಚಂದ್ರೇಗೌಡ, ಮೋದೂರು ಶಿವಣ್ಣ, ಬಿ.ಎನ್.ನಾಗರಾಜಪ್ಪ, ಕಾಂತರಾಜು, ದಿನೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net