

ರಟ್ಟಿಹಳ್ಳಿ: ಹಿರೇಕೆರೂರು ಮತ್ತು ರಟ್ಟಿಹಳ್ಳಿ ತಾಲೂಕಿನಲ್ಲಿ ಕೆಲವೇ ರೈತರಿಗೆ ಬೆಳೆ ವಿಮೆ ನೀಡಲಾಗಿದೆ. ಅತಿವೃಷ್ಟಿಯಿಂದ ಬೆಳೆಗಳು ನಾಶವಾಗಿದ್ದು, ಸರ್ಕಾರ ಕೂಡಲೇ ಬೆಳೆ ಹಾನಿ ಸಮೀಕ್ಷೆ ಕೈಗೊಂಡು ಸೂಕ್ತ ಪರಿಹಾರ ವಿತರಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಹಸೀಲ್ದಾರ್ ಕೆ. ಗುರುಬಸವರಾಜ ಅವರಿಗೆ ಮನವಿ ಸಲ್ಲಿಸಲಾಯಿತು.
ರೈತ ಸಂಘದ ತಾಲೂಕಾಧ್ಯಕ್ಷ ನಾಗರಾಜ ನನ್ನೂರಿ ಮಾತನಾಡಿ, ಅನೇಕ ಗ್ರಾಮಗಳ ರೈತರಿಗೆ ಇಲ್ಲಿಯವರೆಗೆ ಬೆಳೆ ವಿಮೆ ಬಂದಿಲ್ಲ. ಕಳೆದ ವಾರದಿಂದ ಜಿಲ್ಲಾದ್ಯಂತ ಅತಿ ಹೆಚ್ಚು ಮಳೆಯಿಂದಾಗಿ ನೀರು ಜಮೀನುಗಳಿಗೆ ನುಗ್ಗಿ ಮೆಕ್ಕೆಜೋಳ, ಹತ್ತಿ ಇತರ ಬೆಳೆಗಳು ನಾಶವಾಗಿವೆ. ಕಟಾವಿಗೆ ಬಂದ ಬೆಳೆ ಹಾನಿಯಾಗಿದ್ದು, ಸರ್ಕಾರ ಶೀಘ್ರವೇ ಬೆಳೆ ಹಾನಿ ಸಮೀಕ್ಷೆ ಕೈಗೊಂಡು ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ವೀರಪ್ಪ ಮುದಿಯಪ್ಪನವರ, ರೈತ ಸಂಘದ ತಾಲೂಕು ಮಹಿಳಾ ಅಧ್ಯಕ್ಷೆ ಗೌರಮ್ಮ ಬೇವಿನಹಳ್ಳಿ, ಮಂಜಪ್ಪ ಮುದಿಯಪ್ಪನವರ, ಮಂಜುನಾಥ ಗೊಂದಳೆ, ಪರಮೇಶ್ವರಪ್ಪ ಮೇಗಳಮನಿ, ಹನುಮಂತಪ್ಪ ಹೊಸಹುಲ್ಲತ್ತಿ, ಮಲ್ಲನಗೌಡ ಹಿತ್ಲಮನಿ, ಶರಣಪ್ಪ ಅಡವಿನಕರ, ಉಜ್ಜನಗೌಡ ಪಾಟೀಲ, ರೇಖಮ್ಮ ಮುದಿಯಣ್ಣನವರ, ರೇಣುಕಮ್ಮ ಹಡಪದ, ಇತರರು ಉಪಸ್ಥಿತರಿದ್ದರು.