ಗೋಶಾಲೆ ಅಭಿವೃದ್ಧಿಗೆ ಒತ್ತಾಯ

27 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ಮಾದನಭಾವಿಯಲ್ಲಿನ ಗೋಶಾಲೆ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಭಜರಂಗದಳ, ವಿಶ್ವ ಹಿಂದೂ ಪರಿಷತ್​ ವತಿಯಿಂದ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರಿಗೆ ಮಂಗಳವಾರ ಮನವಿಪತ್ರ ಸಲ್ಲಿಸಲಾಯಿತು.
ಗ್ರಾಮದ ಸರ್ಕಾರಿ ಒಡೆತನದ ಗೋ ಶಾಲೆ ಸುಮಾರು 9 ಎಕರೆ ವ್ಯಾಪ್ತಿಯಲ್ಲಿದ್ದು, 60ಕ್ಕೂ ಹೆಚ್ಚು ಗೋವುಗಳಿದ್ದವು. ಆದರೆ ಆ. 22ರಂದು ಭೇಟಿ ನೀಡಿದಾಗ 42 ಗೋವುಗಳು ಮಾತ್ರ ಕಂಡು ಬಂದಿವೆ. ಇದನ್ನು ಪ್ರಶ್ನಿಸಿದರೆ ಪ್ಲಾಸ್ಟಿಕ್​ ಸೇವನೆ ಹಾಗೂ ಚಳಿಯಿಂದ 20 ಗೋವುಗಳು ಮೃತಪಟ್ಟಿವೆ ಎಂದು ಹೇಳುತ್ತಿದ್ದಾರೆ. ಸಾಕಷ್ಟು ನಿಷ್ಕಾಳಜಿಯಿಂದ ಗೋವುಗಳ ಆರೋಗ್ಯ ಸಹ ಕ್ಷೀಣಿಸುತ್ತಿದೆ. ಹೀಗಾಗಿ ಕೂಡಲೇ ವ್ಯವಸ್ಥೆ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಗೋವುಗಳಿಗೆ ಗೋಶಾಲೆ ಎಂಬುದು ಜೈಲಿನಂತಾಗಿದೆ. ಗೋವುಗಳು ತೀವ್ರತರ ನೋವಿನಿಂದ ಬಳಲುತ್ತವೆ. ಅವುಗಳ ಕಾಳಜಿ ಆಗಬೇಕು. ಮೃತಪಟ್ಟ ಗೋವುಗಳ ಅಂತ್ಯಕ್ರಿಯೆ ವೈಜ್ಞಾನಿಕವಾಗಿ ನಡೆಯುತ್ತಿಲ್ಲ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿಯೂ ಇದೆ. ಹೀಗಾಗಿ ಗೋಶಾಲೆ ಅಭಿವೃದ್ಧಿ, ಭದ್ರತೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ವಿಶ್ವ ಹಿಂದೂ ಪರಿಷತ್​, ಬಜರಂಗದಳ ಕಾರ್ಯಕತರಾದ ಶಿವಾನಂದ ಸತ್ತಿಗೇರಿ, ಅನುದೀಪ ಕುಲಕರ್ಣಿ, ಗುರುಶಾಂತ ಹಿರೇಮಠ, ನಾಗರಾಜ ಗಾಣಿಗೇರ, ಸೋಮಶೇಖರ ಚೆನ್ನಶೆಟ್ಟಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net