

ಮಂಗಳೂರು: ಹಿಂದು ಹೆಣ್ಮಕ್ಕಳ ಮಾನ ಕಾಪಾಡುವ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳದಿದ್ದರೆ, ಹಿಂದು ಸಮಾಜವೇ ಈ ಜವಾಬ್ದಾರಿ ವಹಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.
ಉಡುಪಿಯ ಖಾಸಗಿ ಕಾಲೇಜಿನಲ್ಲಿ ನಡೆದ ವಿಡಿಯೋ ಚಿತ್ರೀಕರಣ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ಪುರಭವನ ಮುಂಭಾಗದ ಅಂಬೇಡ್ಕರ್ ಪ್ರತಿಮೆ ಬಳಿ ಸೋಮವಾರ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿರುವುದು ಜಿಹಾದಿ ಸರ್ಕಾರ. ಇದು ನಮ್ಮ ಸರ್ಕಾರ, ನಿಮ್ಮಿಂದ ಏನೂ ಮಾಡಲಾಗದು ಎಂದು ದುಷ್ಕರ್ಮಿಗಳು ಪೊಲೀಸರಿಗೆ ಬೆದರಿಕೆ ಹಾಕುತ್ತಿದ್ದಾರೆ. ಉಡುಪಿಯ ಪ್ರಕರಣದಲ್ಲಿ ವಿಡಿಯೋ ಮಾಡಿದವರು ಹಿಂದುಗಳು ಆಗಿರುತ್ತಿದ್ದ್ದರೆ ಕಾಂಗ್ರೆಸ್ ಇಡೀ ಸಮಾಜಕ್ಕೆ ಬೆಂಕಿ ಹಾಕುತ್ತಿತ್ತು. ಪ್ರಕರಣದ ಆರೋಪಿಗಳಿಗೆ ಯಾರ ಜತೆ ಸಂಪರ್ಕ ಇದೆ ಎಂಬ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಶಾಸಕರಾದ ಭಾಗೀರಥಿ ಮುರುಳ್ಯ, ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ರಾಜೇಶ್ ನಾಕ್, ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಪ್ರತಾಪಸಿಂಹ ನಾಯಕ್, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಸಂಜೀವ ಮಠಂದೂರು, ಮೋನಪ್ಪ ಭಂಡಾರಿ, ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ಬಿಜೆಪಿ ಜಿಲ್ಲಾ ಪ್ರಭಾರಿ ರಾಜೇಶ್ ಕಾವೇರಿ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ವಿಡಿಯೋ ಪ್ರಕರಣ ಮಕ್ಕಳಾಟಿಕೆಗಾಗಿ ಮಾಡಿದ್ದಲ್ಲ. ಇದರ ಹಿಂದೆ ಲವ್ ಜಿಹಾದ್ ಸಂಶಯವಿದೆ. ಪ್ರಕರಣ ಬೆಳಕಿಗೆ ಬಂದ ಕೂಡಲೇ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದರೆ, ಬಿಜೆಪಿ ಪ್ರತಿಭಟನೆ ಮಾಡುವ ಅವಕಾಶ ಬರುತ್ತಿರಲಿಲ್ಲ. ಒಂದು ವರ್ಷದಿಂದ ವಿಡಿಯೋ ಚಿತ್ರೀಕರಣ ನಡೆಯುತ್ತಿದ್ದು, ಮಧ್ಯಾಹ್ನ ಕಾಲೇಜಿಗೆ ಹೊರಗಿನ ವಿದ್ಯಾರ್ಥಿಗಳು ಆಗಮಿಸುತ್ತಿದ್ದರು ಎಂದು ಕಾಲೇಜಿನ ವಿದ್ಯಾರ್ಥಿನಿಯರು ಹೇಳಿದ್ದಾರೆ. ಉಡುಪಿ ವಿಡಿಯೋ ಪ್ರಕರಣದಲ್ಲಿ ಮುಸಲ್ಮಾನ ಹೆಣ್ಮಕ್ಕಳು ತಪ್ಪು ಮಾಡದಿದ್ದರೆ ಅವರನ್ನು ಏಕೆ ಅಮಾನತು ಮಾಡಬೇಕಿತ್ತು? ಉಡುಪಿ ಎಸ್ಪಿ ಕಾಂಗ್ರೆಸ್ ಸರ್ಕಾರದ ಏಜೆಂಟ್ ಆಗಿ ಮಾತನಾಡಿದ್ದಾರೆ. ಪೊಲೀಸರು ಕಾನೂನು ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಹೇಳಿದರು.
ಉಡುಪಿ ಖಾಸಗಿ ಕಾಲೇಜು ವಿಡಿಯೋ ಪ್ರಕರಣದಲ್ಲಿ ಪೊಲೀಸರು ಕಾನೂನು ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಹಿಂದು ಹೆಣ್ಣುಮಕ್ಕಳು ಗೆಳೆತನ ಮಾಡುವಾಗ ಜಾಗರೂಕತೆ ವಹಿಸಬೇಕು. ಯಾರ ಜತೆ ಬೆರೆಯಬೇಕು? ಯಾರ ಜತೆ ಬೆರೆಯಬಾರದು? ಎಂಬ ಬಗ್ಗೆ ಹಿಂದು ಹೆಣ್ಣು ಮಕ್ಕಳಿಗೆ ಪಾಲಕರು ಜಾಗೃತಿ ಮೂಡಿಸಬೇಕು.
ಭಾಗೀರಥಿ ಮುರುಳ್ಯ, ಸುಳ್ಯ ಶಾಸಕಿ