

ಚಳ್ಳಕೆರೆ: ತಾಲೂಕಿನಲ್ಲಿ ಬೆಳೆ ಪರಿಹಾರ ವಿತರಣೆಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ತಾಲೂಕು ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ವಾತಂತ್ರಯೋತ್ಸವ ಆಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಈಗಾಗಲೇ ಕೆಲ ಅಧಿಕಾರಿಗಳಿಗೆ ಶಿಕ್ಷೆ ನೀಡಲಾಗಿದೆ. ಪಂಚಾಯಿತಿ ಹಂತದಲ್ಲಿ ಪರಿಶೀಲನೆ ನಡೆಸಿ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್‌ಗೆ ಸೂಚಿಸಿದರು.
ಈ ಸಂಬಂಧ ಜಿಲ್ಲಾಧಿಕಾರಿ ದಿವ್ಯಾಪ್ರಭು ಅವರಿಗೆ ದೂರವಾಣಿ ಕರೆ ಮಾಡಿದ ಶಾಸಕರು, ತಕ್ಷಣ ತನಿಖೆಗೆ ಆದೇಶಿಸಬೇಕು ಎಂದು ಹೇಳಿದರು.
ತಾಲೂಕಿನಲ್ಲಿ ವಾಡಿಕೆ ಮಳೆ ಎಷ್ಟಾಗಿದೆ. ಬಿತ್ತನೆ ಕಾರ್ಯ ಹೇಗೆ ನಡೆದಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜೆ.ಅಶೋಕ್ ಅವರನ್ನು ಪ್ರಶ್ನಿಸಿದ ಶಾಸಕರು,
ಆರಂಭದಲ್ಲಿ ಮುಂಗಾರು ಕುಂಠಿತವಾಗಿತ್ತು, ಸಮಯಕ್ಕೆ ಬಾರದ ಮಳೆ ವಾಡಿಕೆಗಿಂತ ಹೆಚ್ಚಾಗಿದೆ ಎಂದು ವರದಿ ನೀಡುವುದು ಸರಿಯಲ್ಲ ಎಂದರು.
ಕಳೆದ ವರ್ಷ ಸಮರ್ಪಕ ಬೆಳೆವಿಮೆ ಬಂದಿಲ್ಲದ ಸಮಸ್ಯೆಗಳಿವೆ. ಗ್ರಾಮಗಳ ಹಂತದಲ್ಲಿ ರೈತರ ಸಮಸ್ಯೆಗಳನ್ನು ತಿಳಿದು ಪ್ರಸಕ್ತ ಸಾಲಿನ ಬೆಳೆವಿಮೆ ಬಗ್ಗೆ ಜಾಗೃತಿ ಮೂಡಿಸಬೇಕು.
2015ರಿಂದ ಇಲ್ಲಿವರೆಗೂ ತಾಲೂಕಿಗೆ ಬಂದಿರುವ ಬೆಳೆವಿಮೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಎಂದು ಸೂಚಿಸಿದರು.
ಆ.16ರಿಂದ ಪ್ರತಿ ಸೋಮವಾರ ಇಲಾಖೆ ಅಧಿಕಾರಿಗಳ ಸಭೆ ಕರೆಯಲಾಗುವುದು. ಸರ್ಕಾರಿ ಯೋಜನೆಗಳ ಜಾರಿ ಕುರಿತಾಗಿ ಮತ್ತು ಇಲಾಖೆ ಪ್ರಗತಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು.
ಗ್ರಾಪಂ ಹಂತದಲ್ಲಿ ಜನಸಂಪರ್ಕ ಸಭೆ ನಡೆಸಲಾಗುವುದು. ಇಲಾಖೆಗಳಲ್ಲಿನ ಕೆಲಸದ ವೈಖರಿ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮತ್ತು ಸಿಬ್ಬಂದಿ ಸಿದ್ಧರಿರಬೇಕು ಎಂದರು.
ತಹಸೀಲ್ದಾರ್ ರೆಹಾನ್ ಪಾಷಾ, ಬಿಇಒ ಕೆ.ಎಸ್.ಸುರೇಶ್, ಸಂತೋಷ್ ಕುಮಾರ್, ಬಿ.ಬಹುಗುಣ, ಪಿಎಸ್‌ಐ ಸತೀಶ್ ನಾಯ್ಕ, ಲಿಂಗೇಗೌಡ, ಬಿ.ಶ್ರೀನಿವಾಸ್, ಎಸ್.ಎಚ್.ಸೈಯದ್ ಇತರರಿದ್ದರು.
ಗರಂ ಆದ ಶಾಸಕರು: ಸ್ವಾತಂತ್ರ್ಯೋತ್ಸವದ ಪೂರ್ವಭಾವಿ ಸಭೆಗೆ ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸದೆ ಇರುವ ಉದ್ದೇಶ ತಿಳಿಸಿ ಎಂದು ಶಾಸಕರು, ತಹಸೀಲ್ದಾರ್ ಅವರನ್ನು ಪ್ರಶ್ನಿಸಿದರು.
ನಗರಸಭಾ ಸದಸ್ಯರು, ಸಂಘ ಸಂಸ್ಥೆಗಳ ಮುಖಂಡರನ್ನು ಆಹ್ವಾನಿಸುವಂತೆ ಪೌರಾಯುಕ್ತರಿಗೆ ಸೂಚಿಸಲಾಗಿತ್ತು ಎಂದು ರೆಹಾನ್ ಪಾಷಾ ತಿಳಿಸಿದರು.
ಪೌರಾಯುಕ್ತೆ ಲೀಲಾವತಿ ಅವರನ್ನು ರಘುಮೂರ್ತಿ ಪ್ರಶ್ನಿಸಿದಾಗ, ಕಚೇರಿ ಸಿಬ್ಬಂದಿಯಿಂದ ತಪ್ಪಾಗಿದೆ. ಕೂಡಲೇ ಸರಿಪಡಿಸಿಕೊಳ್ಳುವುದಾಗಿ ಹೇಳಿದರು.
ಅಧಿಕಾರಿಗಳ ಭಾಗಿ ಕಡ್ಡಾಯ: ರಾಷ್ಟ್ರೀಯ ಹಬ್ಬಗಳ ಆಯೋಜನೆ ಶಿಷ್ಟಾಚಾರದಂತೆ ಸ್ವಾತಂತ್ರೊೃೀತ್ಸವದಲ್ಲಿ ಸ್ಥಳೀಯ ಜನಪ್ರತಿನಿಧಿಗಳಿಗೆ ಆಹ್ವಾನ ನೀಡಬೇಕು.
ಜತೆಗೆ ಪ್ರತಿ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ತಾಲೂಕು ಆಡಳಿತ ನಿಗಾವಹಿಸಬೇಕು ಎಂದು ಸೂಚಿಸಿದ ರಘುಮೂರ್ತಿ, ಬಹಿರಂಗ ಸಭೆಯಲ್ಲಿ ಶಾಲಾ ಮಕ್ಕಳ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.