ಸರ್ಕಾರಿ ಶಾಲೆಗೆ ಶಿಕ್ಷಕರ, ಸಿಬ್ಬಂದಿ ಕೊರತೆ : ಕುಪ್ಪೆಪದವಿನಲ್ಲಿ ಸಮಗ್ರ ಶಿಕ್ಷಣ ಶಾಲಾ ಪೋಷಕರ ಸಭೆ ಮೂಲಸೌಲಭ್ಯಕ್ಕೆ ಮನವಿ

New Project (36)
Published on

ವಿಜಯವಾಣಿ ಸುದ್ದಿಜಾಲ ಗುರುಪುರ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ(ಬೆಂಗಳೂರು), ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ(ಬೆಂಗಳೂರು) ಮತ್ತು ದ.ಕ. ಜಿಪಂ ಮಂಗಳೂರು ಆಶ್ರಯದಲ್ಲಿ ಗುರುವಾರ ಕುಪ್ಪೆಪದವಿನ ಕಿಲೆಂಜಾರು ಅರಮನೆ ಸರ್ಕಾರಿ ಪ್ರೌಢಶಾಲೆ ‘ಸಮಗ್ರ ಶಿಕ್ಷಣ ಸಾಮಾಜಿಕ ಪರಿಶೋಧನಾ ಶಾಲಾ ಪೋಷಕರ ಸಭೆ’ ಶಾಲಾ ಸಭಾಗೃಹದಲ್ಲಿ ನಡೆಯಿತು.

ಶಿಕ್ಷಕರ ಕೊರತೆ: ಶಾಲೆಯಲ್ಲಿ ಹಿಂದಿ, ದೈಹಿಕ ಶಿಕ್ಷಣ ಶಿಕ್ಷಕ ಮತ್ತು ಕಂಪ್ಯೂಟರ್, ಸಂಗೀತ, ಡ್ರಾಯಿಂಗ್ ಶಿಕ್ಷಕರ ಕೊರತೆ ಇದ್ದು, ತಕ್ಷಣ ಖಾಲಿ ಹುದ್ದೆಗಳ ನೇಮಕಾತಿಗೆ ಕ್ರಮ ಕೈಗೊಳ್ಳಬೇಕು. ಹೆಣ್ಣುಮಕ್ಕಳ ಶೌಚಗೃಹ ದುರಸ್ತಿ ಮಾಡಬೇಕು ಎಂದು ಪಾಲಕರು ಆಗ್ರಹಿಸಿದರು. ಮುಖ್ಯಶಿಕ್ಷಕ ಬಾಬು ಪಿ.ಎಂ. ಮಾತನಾಡಿ, ಶಾಲೆಯಲ್ಲಿ ಹಿಂದಿ ಮತ್ತು ದೈಹಿಕ ಶಿಕ್ಷಕರಲ್ಲದೆ ದ್ವಿತೀಯ ದರ್ಜೆ ಗುಮಾಸ್ತ, ಅಟೆಂಡರ್ ಹುದ್ದೆ ಖಾಲಿಯಾಗಿದೆ. ಹಿಂದಿ, ದೈಹಿಕ ಶಿಕ್ಷಣ ಶಿಕ್ಷಕ ಹುದ್ದೆ ಭರ್ತಿಗೆ ಇಲಾಖೆಗಳಿಗೆ ಮನವಿ ನೀಡಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಅಥವಾ ಇತರ ಕೌಶಲಾಭಿವೃದ್ಧಿ ವಿಷಯಗಳ ಬಗ್ಗೆ ಶಿಕ್ಷಣ ನೀಡುವಲ್ಲಿ ಇಲಾಖೆ ಕೆಲವು ನಿರ್ದಿಷ್ಟ ಮಾನದಂಡ ಹಾಕಿಕೊಂಡಿದೆ. ಅದು ನಮ್ಮ ಶಾಲೆಗೆ ಹೊಂದಾಣಿಕೆಯಾಗುವುದಿಲ್ಲ. ಆದರೆ ಅನ್ಯ ವಿಷಯಗಳ ಬಗ್ಗೆ ಶಿಕ್ಷಣ ನೀಡಲು ದಾನಿಗಳ ನೆರವು ಪಡೆದುಕೊಳ್ಳಲು ಸಾಧ್ಯವಿದೆ ಎಂದರು.

ಐಟಿಐಗೆ ಆಗ್ರಹ: ಎಸ್‌ಡಿಎಂಸಿ ಸದಸ್ಯ ಶೇಖ್ ಅಬ್ದುಲ್ಲ ತಾಪಂ ಅಧಿಕಾರಿಯವರಿಗೆ ಮನವಿ ನೀಡಿ, ಶಾಲಾ ಆವರಣ ಗೋಡೆ ಹಾಗೂ ಶೌಚಗೃಹ ದುರಸ್ತಿಗೆ ಗ್ರಾಪಂ ಅನುದಾನ ಒದಗಿಸಬೇಕು. ಶಾಲೆಯಲ್ಲಿ ಐಟಿಐ ಸ್ಥಾಪಿಸಲು ಆಗ್ರಹಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ನೀಡಲಾಗಿದೆ. ಕಂಪ್ಯೂಟರ್ ತರಗತಿಗೆ ಇನ್‌ವರ್ಟರ್ ಅಳವಡಿಸಬೇಕು. ಅನ್ಯ ಕೆಲಸಗಳಿಗೆ ಶಿಕ್ಷಕರ ನಿಯೋಜನೆ ಮಾಡಬಾರದು. ಶಾಲೆಯ ಹೆಚ್ಚಿನ ಕಾರ್ಯ-ಯೋಜನೆಗಳು ದಾನಿಗಳ ನೆರವಿನಿಂದ ನಡೆಯುವಂತಾಗಿದೆ ಎಂದರು.

ಪಂಚಾಯಿತಿ ಸದಸ್ಯ ರಫೀಕ್ ಆಚಾರಿಜೋರ ಮಾತನಾಡಿದರು. ಎಸ್‌ಡಿಎಂಸಿ ಸದಸ್ಯ ಸುಂದರ್ ಶಾಂತಿ ಅಧ್ಯಕ್ಷತೆ ವಹಿಸಿದ್ದರು. ಶಾಲೆ ಸಿಬ್ಬಂದಿ ಜಯಶ್ರೀ ಮತ್ತು ಸೌಜನ್ಯಾ ಶಾಲೆ ಸಮಗ್ರ ಶಿಕ್ಷಣ ಸಾಮಾಜಿಕ ಪರಿಶೋಧನಾ ವರದಿ ಓದಿದರು. ಕುಪ್ಪೆಪದವು ಪಿಡಿಒ ಸವಿತಾ ಮಂದೋಲಿಕರ್, ತಾಪಂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಧನಲಕ್ಷ್ಮೀ, ಎಸ್‌ಡಿಎಂಸಿ ಉಪಾಧ್ಯಕ್ಷೆ ಅನಿತಾ, ಸದಸ್ಯ ಶಂಕರ್ ಜೋಗಿ, ಶಿಕ್ಷಕ ಉದಯ ಕುಮಾರ್ ಉಪಸ್ಥಿತರಿದ್ದರು. ಶಿಕ್ಷಕ ಮಾರ್ಕ್ ಮೆಂಡೋನ್ಸ ಕಾರ್ಯಕ್ರಮ ನಿರೂಪಿಸಿದರು.

ಇದು ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕಾಗಿ ಸರ್ಕಾರ ಜಾರಿಗೊಳಿಸಿದ ಹೊಸ ಕಾರ್ಯಕ್ರಮ. 2023-24ನೇ ಸಾಲಿನಲ್ಲಿ ಶಾಲೆಗಳಲ್ಲಿ ಈ ಕಾರ್ಯಕ್ರಮ ಹೇಗೆ ಅನುಷ್ಠಾನಗೊಂಡಿದೆ ಎಂಬುದರ ಬಗ್ಗೆ ಶಾಲೆಗಳು ಮತ್ತು ಪಾಲಕರಲ್ಲಿ ವಿಚಾರಿಸಿ, ಶಾಲಾಭಿವೃದ್ಧಿ ದೆಸೆಯಲ್ಲಿ ಸಲಹೆ-ಸೂಚನೆ ಕ್ರೋಡೀಕರಿಸಿ ವರದಿ ಸಿದ್ಧಪಡಿಸಲಾಗುತ್ತದೆ. ಬಳಿಕ ತಾಲೂಕು ಮಟ್ಟದಲ್ಲಿ ಚರ್ಚಿಸಿ ಸರ್ಕಾರಕ್ಕೆ ವರದಿ ಒಪ್ಪಿಸಲಾಗುತ್ತದೆ. ಈ ಮೂಲಕ ಶಾಲೆಗಳು ಎದುರಿಸುತ್ತಿರುವ ಮೂಲಸೌಲಭ್ಯ ಕೊರತೆ ನೀಗುವ ಸಾಧ್ಯತೆ ಇದೆ. ಧನಲಕ್ಷ್ಮೀ ತಾಪಂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಪಂಚಾಯಿತಿ ವತಿಯಿಂದ ಶಾಲೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಮುಂದಿನ ಕ್ರಿಯಾ ಯೋಜನೆಯಲ್ಲಿ ಶಾಲಾ ಆವರಣ ಗೋಡೆ ದುರಸ್ತಿ, ಹೆಣ್ಮಕ್ಕಳ ಶೌಚಗೃಹ(ಸ್ಯಾನಿಟರಿ ಬರ್ನಿಂಗ್ ಉಪಕರಣ) ದುರಸ್ತಿಗೆ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಶಾಲೆ ಕೆಲವು ಮೂಲಸೌಲಭ್ಯ ಕೊರತೆ ನೀಗಿಸುವಲ್ಲಿ ಸಿಎಸ್‌ಆರ್ ನಿಧಿ ಒದಗಿಸುವಂತೆ ಶಾಸಕರಲ್ಲಿ ಚರ್ಚಿಸಲಾಗುವುದು. ಸವಿತಾ ಮಂದೋಲಿಕರ್ ಪಿಡಿಒ, ಕುಪ್ಪೆಪದವು https://www.vijayavani.net/toilet-building-inauguration https://www.vijayavani.net/gyanvahini-program

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net