

ಹುಬ್ಬಳ್ಳಿ: ಶ್ರೀರಾಮ ಹಾಗೂ ಶ್ರೀ ಕೃಷ್ಣಾವತರಗಳಲ್ಲಿ ಮಾನವ ಜೀವನಕ್ಕೆ ಬೇಕಾದ ಸಮಗ್ರ ಶಿಕ್ಷಣವೇ ಇದೆ. ಪ್ರತಿಯೊಂದನ್ನು ಕಲಿತರೆ ಮಾನವ ಕುಲವೇ ಉದ್ಧಾರವಾಗಲಿದೆ ಎಂದು ಪ್ರವಚನಕಾರ ಪಂ. ಡಾ. ವೆಂಕಟನರಸಿಂಹಾಚಾರ್ಯ ಜೋಶಿ ತಿಳಿಸಿದರು.
ಅಧಿಕ ಶ್ರಾವಣ ಮಾಸ ನಿಮಿತ್ತ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಸಮೀಪದ ಸತ್ತೂರಿನ ಸಂಜೀವ ಜೋಶಿ ನಿವಾಸದಲ್ಲಿ ಆಯೋಜಿಸಿರುವ ಶ್ರೀಮದ್ಭಾಗವತ ಸಪ್ತಾಹದ ಐದನೇ ದಿನದ ಕಾರ್ಯಕ್ರಮದಲ್ಲಿ ಸೋಮವಾರ ಭಾಗವಹಿಸಿ ಅವರು ಮಾತನಾಡಿದರು.
ತಂದೆಯ ಮಾತು ನಡೆಸುವ ಆದರ್ಶ ಪುತ್ರನಾಗಿ, ಏಕಪತ್ನಿಯಲ್ಲಿ ಪ್ರೀತಿ ತೋರಿದ, ಆದರ್ಶ ಪತ್ನೀವ್ರತಸ್ಥನಾಗಿ, ಆದರ್ಶ ರಾಜನಾಗಿ, ಶ್ರೀರಾಮ ಪುರುಷೋತ್ತಮನಾಗಿ ಕಂಡಿದ್ದಾನೆ ಎಂದರು.
ಶ್ರೀ ಕೃಷ್ಣ ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸಿ, ಜಗದ್ಗುರುವಾಗಿ, ಗೀತೆ ಹಾಗೂ ಭಾಗವತವನ್ನು ಉಪದೇಶಿಸಿದ. ಗೊಲ್ಲನಾಗಿ ಗೋವಿನ ಮಹತ್ವನ್ನು ಜಗತ್ತಿಗೆ ಪರಿಚಯಿಸಿದ. ಕೃಷಿ ಪ್ರಧಾನವಾದ ಅಖಂಡ ಭಾರತಕ್ಕೆ ಗೋವುಗಳು ಅತ್ಯವಶ್ಯ ಎಂಬ ಸಂದೇಶ ಬೀರಿದ. ಆದ್ದರಿಂದ ಕೃಷ್ಣ ಎನಿಸಿದ ಎಂದು ಸಂಗೀತದೊಂದಿಗೆ ಸುಂದರವಾಗಿ ವರ್ಣಿಸಿದರು.
ಕಾರ್ಯಕ್ರಮದ ಪೂರ್ವದಲ್ಲಿ ಬಳಗದ ಸುಮಂಗಲೆಯರಿಂದ ಭಜನೆ, ಸದಸ್ಯರಿಂದ ವಿಷ್ಣು ಸಹಸ್ರನಾಮಾದಿ ಪಾರಾಯಣ ಜರುಗಿತು.
ರಘೂತ್ತಮ ಅವಧಾನಿ, ಕೃಷ್ಣ ಹುನಗುಂದ, ಡಿ.ಕೆ. ಜೋಶಿ, ಡಾ. ಶ್ರೀನಾಥ, ಪ್ರೊ. ಸಿ.ಕೆ. ಕುಲಕರ್ಣಿ, ಪ್ರೊ. ವಾಮನ ಭಾದ್ರಿ, ಶ್ರೀನಿವಾಸ ಪಟ್ಟಣಕುಡಿ, ವಿಠ್ಠಲ ಅಂಬೇಕರ, ಬದರಿನಾಥ ಬೆಟಗೇರಿ, ರಾಘವೇಂದ್ರ ಮುಂಡಗೋಡ, ಆನಂದ ಬಾಗಲ, ಭೀಮರಾವ ಗಡ, ಮಧುಕರ ಜೋರಾಪೂರ, ವೆಂಕಟೇಶ ಕುಲಕರ್ಣಿ, ಎಲ್. ವಿ. ಜೋಶಿ, ವಿಲಾಸ ಸಬನೀಸ, ಗುರುನಾಥ ಸರದೇಶಮುಖ, ಅಶೋಕ ಬಹದ್ದೂರ ದೇಸಾಯಿ, ಇತರರು ಇದ್ದರು.